'ಧಾರಾವಾಹಿಗಳ ರಿಮೇಕ್ ವಿಷಾದ'
ಶಿವಮೊಗ್ಗ: ನಮ್ಮಲ್ಲಿಯೇ ಉತ್ತಮ ಬರಹಗಾರಿದ್ದರೂ, ಅನ್ಯ ಭಾಷೆಯ ಧಾರವಾಹಿಗಳನ್ನು ರಿಮೇಕ್ ಮಾಡುವ ಪ್ರವೃತ್ತಿ ಕಡಿಮೆಯಾಗಿಲ್ಲ. ವಿಶೇಷವೆಂದರೆ ರಾಜ್ಯಕ್ಕೆ ಸಿಕ್ಕಿರುವ ಜ್ಞಾನಪೀಠ ಪ್ರಶಸ್ತಿಗಳು ಬೇರೆ ಯಾವ ರಾಜ್ಯಕ್ಕೂ ಸಿಕ್ಕಿಲ್ಲ. ಆದರೂ ಬೇರೆ ಭಾಷೆಯ ಬರಹಗಾರರೇ ಕನ್ನಡದ ಧಾರವಾಹಿಗಳಿಗೆ ಕಥೆ ಬರೆಯುತ್ತಿರುವುದು ವಿಪಾರ್ಯಾಸ ಎಂದು ರಂಗಭೂಮಿ, ಚಲನಚಿತ್ರ, ಕಿರುತೆರೆ ಕಲಾವಿದೆ ಭಾರ್ಗವಿ ನಾರಾಯಣ್ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ಸಂಘ ನಗರದಲ್ಲಿ ಸೋಮವಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಮೊದಲಾದವರು ಇದ್ದರು.
ಆ್ಯಮ್ವೇ
ಮುಖ್ಯಸ್ಥನ ಬಂಧನ
ಕೋಯಿಕೋಡ್: ಆ್ಯಮ್ವೇ ಇಂಡಿಯಾ ಮುಖ್ಯಸ್ಥ, ಸಿಇಒ ವಿವಿಯಮ್ ಎಸ್. ಪಿನಾಕ್ನೇಯ್ ಮತ್ತು ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಜಯ್ ಮಲ್ಹೋತ್ರಾ ಹಾಗೂ ಅನ್ಶು ಬುಧ್ರಾಜ ಬಂಧಿತ ನಿರ್ದೇಶಕರಾಗಿದ್ದಾರೆ. ವಿಶಾಲಾಕ್ಷಿ ಎನ್ನುವವರು ಕಂಪನಿ ವಿರುದ್ಧ 2012ರಲ್ಲಿ ದೂರು ಸಲ್ಲಿಸಿದ್ದರು. ಅದರ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ನಿಮಿಷಕ್ಕೆ 7,200 ಟಿಕೆಟ್ ಬುಕ್ಕಿಂಗ್!
ನವದೆಹಲಿ: ಐಆರ್ಸಿಟಿಸಿ ನೂತನ ಯೋಜನೆಗೆ ಸರ್ಕಾರದ ಅನುಮತಿ ಸಿಕ್ಕರೆ ಶೀಘ್ರದಲ್ಲೇ ರೇಲ್ವೆ ಇ- ಟಿಕೆಟಿಂಗ್ ವೆಬ್ಸೈಟ್ ಪ್ರತಿ ನಿಮಿಷಕ್ಕೆ 7,200 ಟಿಕೆಟ್ಗಳನ್ನು ಬುಕ್ ಮಾಡುವ ಸಾಮರ್ಥ್ಯ ಹೊಂದಲಿದೆ. ಸದ್ಯ ಐಆರ್ಸಿಟಿಸಿ ವೆಬ್ಸೈಟ್ ಮೂಲಕ ನಿಮಿಷಕ್ಕೆ 2 ಸಾವಿರ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಐಆರ್ಸಿಟಿಸಿ ವೆಬ್ಸೈಟ್ ಅನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 100 ಕೋಟಿ ವೆಚ್ಚದ ಯೋಜನೆಯೊಂದನ್ನು ರೇಲ್ವೆ ಸಚಿವ ಸಿ.ಪಿ. ಜೋಶಿ ಮುಂದಿಡಲಾಗಿದೆ. ಸೋಮವಾರ ನಡೆದ ಸಭೆಯಲ್ಲಿ ಐಆರ್ಸಿಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಟಂಡನ್ ಈ ಪ್ರಸ್ತಾಪ ಮಾಡಿದ್ದಾರೆ.
50ಕ್ಕೆ ಸ್ನೇಹಿತನ ಕೊಂದ ಪಾಪಿ!
ಶಿವಮೊಗ್ಗ: ಕೇವಲ ಐವತ್ತು ರುಪಾಯಿ ಸಾಲ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ನಗರದ ಹೊಳೆಬೆನವಳ್ಳಿ ತಾಂಡದಲ್ಲಿ ನಡೆದಿದೆ. ರಾಜು ಮೃತ ವ್ಯಕ್ತಿ (30). ಇವರು ಇಲ್ಲಿನ ನಾಗೇಶ್ನೊಂದಿಗೆ ಎಳನೀರು ಕೀಳಲು ಹೋಗುತ್ತಿದ್ದರು. ಖರ್ಚಿಗಾಗಿ ರಾಜು, ನಾಗೇಶ್ನ ಬಳಿ 50 ಸಾಲ ಪಡೆದಿದ್ದ. ರಾಜು ಬಹಳ ದಿನಗಳಿಂದ ಹಣ ವಾಪಸು ನೀಡದಿದ್ದಾಗ, ಸೋಮವಾರ ನಾಗೇಶ್ ಹಣ ಕೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ನಾಗೇಶ್ ಇಟ್ಟಿಗೆಯಿಂದ ರಾಜುವಿನ ಎದೆಗೆ ಹೊಡೆದಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆತರಲಾಯಿತಾದರೂ ರಾಜು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.