ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನೇರ ಹಣ ವರ್ಗಾವಣೆ ಅನುಷ್ಠಾನ

Lingaraj Badiger
Updated On : 28 May 2013, 10:26 am

ಶಿವಮೊಗ್ಗ: ವಿದ್ಯಾರ್ಥಿ ವೇತನ, ಗ್ಯಾಸ್ ಸಬ್ಸಿಡಿ ಸೇರಿದಂತೆ 26 ಯೋಜನೆಗಳಿಗೆ ಕೇಂದ್ರ ಸರ್ಕಾರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಉದ್ದೇಶದಿಂದ ನೇರ ಹಣ ವರ್ಗಾವಣೆ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಜಿಲ್ಲೆಯಲ್ಲಿ ಇದೀಗ ಈ ಯೋಜನೆಯ ಅನುಷ್ಠಾನ ಪೂರ್ವ ತಯಾರಿ ಆರಂಭವಾಗಿದೆ.
 ಸೋಮವಾರ ಜಿಲ್ಲಾ ಲೀಡ್ ಬ್ಯಾಂಕ್ (ಕೆನರಾ)ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೆನರಾ ಬ್ಯಾಂಕಿನ ಪ್ರಧಾನ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಭಟ್, ದೇಶದ 43 ಜಿಲ್ಲೆಗಳಲ್ಲಿ ಜನವರಿ 1ರಿಂದ ಯೋಜನೆ ಪ್ರಾಂಭವಾಗಿದ್ದು 2013ರ ಜುಲೈ 1ರಿಂದ 78 ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಶಿವಮೊಗ್ಗ ಕೂಡ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕೃತವಾಗಿ ಪೂರ್ವ ತಯಾರಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ನೇರವಾಗಿ ಬ್ಯಾಂಕ್ ಖಾತೆಗೆ: ಎಲ್ಲಾ ಅರ್ಹ ಫಲಾನುಭವಿಗಳಿಗೆ ಯಾವುದೇ ಅಡಚಣೆ ಇಲ್ಲದೇ ಸರ್ಕಾರದ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆ ಮುಖಾಂತರ ತಲುಪಿಸುವ ವ್ಯವಸ್ಥೆಯೇ ನೇರ ಸಹಾಯ ಯೋಜನೆಯಾಗಿದೆ. ಈ ಯೋಜನೆಗೆ ಮುನ್ನ ಪ್ರತಿಯೊಬ್ಬ ಫಲಾನುಭವಿ ಬ್ಯಾಂಕಿನ ಖಾತೆ ತೆರೆಯಬೇಕು. ಜೊತೆಗೆ ಬ್ಯಾಂಕಿನ ಖಾತೆಗೆ ಆಧಾರ್ ಕಾರ್ಡ್‌ನ ಮಾಹಿತಿ ನೀಡಬೇಕು. ಗ್ಯಾಸ್ ಕಂಪನಿ ಚಂದಾದಾರರಾಗಿದ್ದಲ್ಲಿ, ಆಧಾರ್ ಕಾರ್ಡ್‌ನ ಸಂಖ್ಯೆಯನ್ನು ಗ್ಯಾಸ್ ಕಂಪನಿಗೆ ನೀಡಬೇಕು. ವಿವಿಧ ರೀತಿಯ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೆ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು, ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕಾಗುತ್ತದೆ.
ಖಾತೆ ತೆರೆಯಲು ಸೂಚನೆ: ಕೆನರಾ ಬ್ಯಾಂಕ್ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ಆಗಿದ್ದು, ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಫಲಾನುಭವಿಗಳ ಮಾಹಿತಿಯನ್ನು ಕೇಳಲಾಗಿದೆ ಹಾಗೂ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಫಲಾನುಭವಿಗಳ ಖಾತೆಯನ್ನು ತೆರೆಯಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಕೆನರಾ ಬ್ಯಾಂಕ್ ಕೇರಳದ ವೈನಾಡ್ ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಈಗಾಗಲೇ ಪ್ರಕ್ರಿಯೆಯನ್ನು ಬಹುತೇಕ ಮುಗಿಸುವ ಹಂತಕ್ಕೆ ಬಂದಿದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಶಿವಮೊಗ್ಗದಲ್ಲಿ ಕೂಡ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ ಎಂದ ಅವರು, ಜನಸಂಪರ್ಕ ಸಭೆ, ಫಲಾನುಭವಿಗಳು ಬ್ಯಾಂಕ್ ಖಾತೆ ತೆರೆಯುವಂತೆ ಮಾಡುವುದು, ಬ್ಯಾಂಕ್ ಅಧಿಕಾರಿಗಳಿಗೆ ತಿಳುವಳಿಕೆ, ತರಬೇತಿ ಇತ್ಯಾದಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ನೇಮಕಾತಿ: ಕೆನರಾ ಬ್ಯಾಂಕ್‌ನಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ವರ್ಷ 7 ಸಾವಿರ ಜನರನ್ನು ನೇಮಿಸಲಾಗುತ್ತಿದೆ. 4 ಸಾವಿರ ಅಧಿಕಾರಿ ಹುದ್ದೆ, 2 ಸಾವಿರ ಕ್ಲರ್ಕ್ ಹಾಗೂ ಆಡಿಟರ್, ಐಟಿ ಸೇರಿದಂತೆ ಉಳಿದ ಒಂದು ಸಾವಿರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಬ್ಯಾಂಕಿಂಗ್ ಹುದ್ದೆಗೆ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement