ಸೇವಾ ಮನೋಭಾವ ಬೆಳೆಸಿಕೊಳ್ಳಿ
ಕ.ಪ್ರ. ವಾರ್ತೆ, ಭದ್ರಾವತಿ, ಮೇ 27
ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸೇವಾ ಮನೋಭಾವನೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಐ.ಎಸ್. ಬಣಕಾರ್ ಹೇಳಿದರು.
ಅವರು ಭದ್ರಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯಡಿಯ 2012-13ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತೀರ್ಥಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕಾಳಿದಾಸ ನಾಯಕ್ 7 ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳ ಕಾರ್ಯಚಟುವಟಿಕೆ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಮುಂದಾಳತ್ವ ವಹಿಸಿ: ಭದ್ರಾವತಿಯ ಸರ್ಕಾರಿ ಕೈ.ತ. ಸಂಸ್ಥೆಯ ಎಂ.ಎಸ್. ಸುದರ್ಶನ್ ಶಿಬಿರಾರ್ಥಿಗಳು ಶ್ರದ್ಧೆಯಿಂದ ಭಾಗವಹಿಸಿ ಮುಂದಾಳತ್ವ ಗುಣಗಳನ್ನು ಹಾಗೂ ಸೇವಾ ಮನೋಭಾವನೆಯನ್ನೂ ಬೆಳೆಸಿಕೊಳ್ಳಬೇಕು ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಟಿ. ಶೇಖರಪ್ಪ ಶಿಬಿರಾರ್ಥಿಗಳು ಸಮಯಪಾಲನೆಯತ್ತ ಹೆಚ್ಚು ಗಮನ ನೀಡಬೇಕು ಎಂದರು.
ಕಿರಿಯ ತರಬೇತಿ ಅಧಿಕಾರಿ ವಿಜಯಕುಮಾರ್ ಸಪಲಿ ಕಾರ್ಯಕ್ರಮ ನಿರೂಪಿಸಿದರು. ಎಂ. ಪುಟ್ಟಲಿಂಗಮೂರ್ತಿ ವಂದಿಸಿದರು.
ಅರ್ಜಿ ಆಹ್ವಾನ
ಶಿವಮೊಗ್ಗ: ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ ಜೂನ್ 1ರಿಂದ ತರಗತಿಗಳು ಪ್ರಾರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಮುಖ್ಯೋಪಾಧ್ಯಾಯ ಸಿ. ರೇಣುಕಾರಾಧ್ಯ ತಿಳಿಸಿದ್ದಾರೆ. ವಿವರಗಳಿಗಾಗಿ- 9448244093.
ಲೋಕಾರ್ಪಣೆ
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದ ಶ್ರೀ ಮಾರಿಕಾಂಬದೇವಿ ಮತ್ತು ಶ್ರೀ ದುರ್ಗಾಂಬಿಕ ದೇವಿಯ ನೂತನ ದೇವಾಲಯ ಲೋಕಾರ್ಪಣೆಗೊಂಡಿದೆ. ಮ.ನಿ. ರೇವಣ್ಣಸಿದ್ದ ಸ್ವಾಮೀಜಿ, ಗುರುಬಸವಸ್ವಾಮೀಜಿ ಮತ್ತು ಪಶುಪತಿ ಶಿವಾನಂದ ಶಿವಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಂಗಾಪೂಜೆ, ಹೋಮ, ದೇವಾಲಯದ ಗೃಹ ಪ್ರವೇಶ, ಕಳಸಾರೋಹಣ, ಮಹಾಮಂಗಳರಾತಿ ಮತ್ತು ಸರ್ವಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.