ಕಾರ್ಮಿಕರ ಹಿತರಕ್ಷಣೆ ಮಾಲೀಕರ ಕರ್ತವ್ಯ
ಕಪ್ರವಾರ್ತೆ, ಭದ್ರಾವತಿ, ಮೇ 28
ವರ್ತಕರು ಕೇವಲ ಹಣ ಮಾಡುವವರು ಎಂಬ ಭಾವನೆ ಸಮಾಜದಲ್ಲಿ ಮೂಡಬಾರದು. ವರ್ತಕರು ಮತ್ತು ಗ್ರಾಹಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಎಂ.ಜೆ.ಅಪ್ಪಾಜಿ ನುಡಿದರು.
ಕಾರ್ಮಿಕರ ಹಿತಾಸಕ್ತಿ: ಅವರು ಮಂಗಳವಾರ ಪಟ್ಟಣದ ಜೈನ್ ಭವನದಲ್ಲಿ 47 ವರ್ಷಗಳ ನಂತರ ಪುನಃ ಅಸ್ತಿತ್ವಕ್ಕೆ ಬಂದ ಭದ್ರಾವತಿ ನಗರ ವರ್ತಕರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಭದ್ರಾವತಿ ಕ್ಷೇತ್ರ ವಿಸ್ತಾರವಾದುದಾದರೂ ಬಡತನದ ರೇಖೆಗಿಂತ ಕೆಳಗಿನ ಜನರು ಇಲ್ಲಿ ಅಧಿಕವಾಗಿದ್ದಾರೆಂದರು. ಕಾರ್ಮಿಕರೇ ಹೆಚ್ಚಾಗಿರುವ ಇಲ್ಲಿ ವರ್ತಕರು ತಮ್ಮಲ್ಲಿ ಕೆಲಸ ಮಾಡುವವರ ಹಿಸಾಸಕ್ತಿಯ ಕಡೆ ಹೆಚ್ಚು ಗಮನವೀಯುವ ಅಗತ್ಯವಿದೆ ಎಂದು ಒತ್ತಿಹೇಳಿದರು.
ಭದ್ರಾವತಿಯಲ್ಲಿ ಕಾರ್ಮಿಕರು ಸರ್ ಎಂ.ವಿಶ್ವೇಶ್ವರಾಯನವರ ಭಾವಚಿತ್ರವನ್ನು ಪೂಜಿಸುತ್ತಾರೆ. ಅನ್ನದಾತನನ್ನು ಕೆಲಸಗಾರರೂ ಎಂದಿಗೂ ಮರೆಯುವುದಿಲ್ಲ. ನಾನೂ ಸಹ 30 ವರ್ಷಗಳ ಹಿಂದೆ 20 ರು.ಗಳ ಸಂಬಳಕ್ಕೆ ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದೆ. ಆದ್ದರಿಂದ ಕಾರ್ಮಿಕರ ಕಷ್ಟವೇನೆಂದು ಬಹಳ ಹತ್ತಿರದಿಂದ ಬಲ್ಲೆ. ಕೆಲಸಗಾರರ ಹಿತಾಸಕ್ತಿಯನ್ನು ಕಾಪಾಡುವ ಮಾಲೀಕನಿಗೆ ಎಂದಿಗೂ ಒಳ್ಳೆಯ ಭವಿಷ್ಯವಿರುತ್ತದೆ ಎಂದು ಅವರು ತಿಳಿಸಿದರು.
ಹಾವು ಏಣಿಯಾಟ: ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ವಿ.ವಸಂತಕುಮಾರ್, ವರ್ತಕ ಏಣಿಯೇ ಇಲ್ಲದ ಹಾವು ಏಣಿ ಆಟ ಆಡುವವ ಎಂದು ವರ್ಣಿಸಿದರು. ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡುವುದು ಒಂದು ರೀತಿ ದೇಶಸೇವೆಯೇ ಆಗಿದೆ. ಆದರೆ ವರ್ತಕನ ಮೇಲೆ ಹೇರಿರುವ ಕಾನೂನು ಪಾಲಿಸರು ಅಸಾಧ್ಯವಾದುದು. ಎಲ್ಲಿಯೋ ಅವುಗಳ ಸುಧಾರಣೆಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಿ.ಆರ್.ವಿಶ್ವನಾಥ್, ಕಾನೂನು ಮಾಪನ ಶಾಸ್ತ್ರ ಇಲಾಖಾಯ ಜಿಲ್ಲಾ ಸಹಾಯಕ ನಿಯಂತ್ರಕ ಎಂ.ಎಸ್.ಹಿಪ್ಪರಗಿ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್ ಅವರವರ ಇಲಾಖೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ವರ್ತಕರಿಗೆ ಮಾಹಿತಿ ನೀಡಿದರು.
ಗುರುತಿನ ಚೀಟಿ: ಸಮಾರಂಭದಲ್ಲಿ ಶಾಸಕ ಎಂ.ಜೆ.ಅಪ್ಪಾಜಿ ವರ್ತಕರಿಗೆ ವಿತರಿಸುವ ವಾಣಿಜ್ಯ ತೆರಿಗೆ ನೋಂದಣಿ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಸದಸ್ಯರಿಗೆ ಬಹುಮಾನ ಡ್ರಾ ಮಾಡಲಾಯಿತು. ಶಾಸಕ ಎಂ.ಜೆ.ಅಪ್ಪಾಜಿ ಲಾಟರಿ ಡ್ರಾ ಎತ್ತಿ ಬಹುಮಾನಗಳನ್ನು ಸಹ ವಿತರಿಸಿದರು.
ಸಂಸ್ಥೆ ಬಲಪಡಿಸಿ:
ಭದ್ರಾವತಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಶೈಲೇಂದ್ರ ಮಾತನಾಡಿ ವರ್ತಕರ ಸಂಘದ ಸದಸ್ಯರೆಲ್ಲರೂ ತಮ್ಮ ಸಂಸ್ಥೆಯ ಸದಸ್ಯರಾಗಿ ಆ ಸಂಸ್ಥೆಯನ್ನೂ ಬಲಪಡಿಸುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಎಚ್.ಎಸ್.ಗುರುರಾಜರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವತ್ಸಲಾ ಶ್ರೀನಾಥ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೆ.ವಿ.ಹರೀಶ್ಬಾಬು ಸ್ವಾಗತಿಸಿದರು. ಅರುಣ್ ಮಲ್ಹೋತ್ರ ಪ್ರಾಸ್ತಾವಿಕ ಭಾಷಣ ಮಾಡಿದರು. ಸುನಿಲ್ ಮಲ್ಹೋತ್ರ ಕಾರ್ಯಕ್ರಮ ನಿರೂಪಿಸಿದರು. ಭರತ್ ವಂದಿಸಿದರು.