ಕಿರಿದಾದ ಮಳೆಗಾಲುವೆ...
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 28
ಮಳೆಗಾಲ ಮತ್ತೆ ಶುರುವಾಗಿದೆ. ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಈ ಬಾರಿ ಮಳೆಗಾಲ ಎದುರಿಸಲು ಸಿದ್ಧತೆ ಹೇಗಿದೆ? ಮೊದಲೇ ಮಲೆನಾಡು. ಯಾವತ್ತಾದರೂ ಒಂದುದಿನ 1 ಗಂಟೆಗೆ 30 ಮಿ.ಮೀ. ಮಳೆ ಸುರಿಯಿತು ಎಂದರೆ ನಗರದ ಅರ್ಧದಷ್ಟು ನಾಗರಿಕರಿಕರಿಗೆ ಕಷ್ಟ ಎದುರಾಗುತ್ತದೆ. ಮನೆಗಳಿಗೆ ನೀರು ನುಗ್ಗುತ್ತದೆ. ರಸ್ತೆಯ ಮೇಲೆ ನೀರು ನಿಲ್ಲುತ್ತದೆ. ಕೆಲವೆಡೆ ಬೈಕ್‌ಗಳೇ ಮುಳುಗಿಹೋಗುತ್ತವೆ.
ಇದೇನು ಬಹಳ ಹೊತ್ತು ಇರುವುದಿಲ್ಲ. ಮಳೆ ನಿಂತ ಒಂದೆರಡು ಗಂಟೆಗಳಲ್ಲಿ ನೀರು ಹರಿದುಹೋಗುತ್ತದೆ. ಆದರೆ ಅಷ್ಟರೊಳಗೆ ಆಗುವ ಸಮಸ್ಯೆಯಿಂದ ಸುಧಾರಿಸಿಕೊಳ್ಳಲು ಒಂದೆರಡು ದಿನಗಳೇ ಬೇಕು.
ಆತಂಕದಲ್ಲಿ: ಶಿವಮೊಗ್ಗ ನಗರದಲ್ಲಿ ಮಳೆಗಾಲದ ವೇಳೆ ಹೆಚ್ಚು ಸಂಕಷ್ಟಕ್ಕೊಳಗಾಗುವ ಗಾಂಧಿ ನಗರ, ಅಮೀರ್ ಅಹಮದ್‌ಕಾಲೋನಿ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ವಿನಾಯಕ ನಗರ, ಗಾರ್ಡನ್ ಎರಿಯಾ ಇತ್ಯಾದಿ ಪ್ರದೇಶಗಳು ಈಗ ಮತ್ತೆ ಆತಂಕದಲ್ಲಿವೆ. ಯಾವತ್ತೂ ಸಮಸ್ಯೆಯಾಗುತ್ತಿದ್ದ ಕುಂಬಾರಗುಂಡಿ, ಇಮಾಂಬಾಡಾದಲ್ಲಿ ಈಗ ಮೊದಲಿನಷ್ಟು ಸಮಸ್ಯೆ ಇಲ್ಲ.
ಮಳೆಗಾಲುವೆ: ವೆಂಕಟೇಶ ನಗರ, ಗಾಂಧಿ ನಗರ, ರೈಲ್ವೆ ಸ್ಟೇಷನ್ ಇತ್ಯಾದಿ ಪ್ರದೇಶಗಳ ಮೂಲಕ ಹಾದುಹೋಗುವ ಮಳೆಗಾಲುವೆ ಯಾವಾಗ ಕಿರಿದಾಗುತ್ತಾ ಹೋಯಿತೋ ಅವತ್ತಿಂದಲೇ ಜನರು ಕಷ್ಟ ಪಡುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷದಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗುತ್ತಲೇ ಇದೆ.
ಇದೇನು ಶುದ್ಧ ಮಳೆ ನೀರಲ್ಲ. ಮನೆಯ ಎದುರಿನ ಚರಂಡಿಯಿಂದ, ಹಿತ್ತಲಿನ ಶೌಚಾಲಯದಿಂದ ಈ ನೀರು ನುಗ್ಗಿ ಬಂದು ಇಡೀ ಮನೆಯನ್ನು ಆವರಿಸಿ ನಾಲ್ಕೈದು ಅಡಿ ಎತ್ತರ ನಿಲ್ಲುತ್ತದೆ. ಈ ಕೊಳಚೆ ನೀರಿಗೆ ಗಾಂಧಿ ನಗರದ ದೊಡ್ಡಮನೆ, ನಾಯಕ್ ಕಾಲೋನಿಯ ಹಂಚಿನ ಮನೆ, ಅಮೀರ್ ಅಹಮದ್ ಕಾಲೋನಿಯ ಕೊಳಚೆ ಪ್ರದೇಶ ಎಂಬ ಯಾವ ಬೇಧಭಾವವಿಲ್ಲ. ಎಲ್ಲರ ಮನೆಗೂ ಸಮಾನವಾಗಿ ನುಗ್ಗಿ ನಿದ್ದೆಗೆಡಿಸುತ್ತದೆ.
ಮಳೆಗಾಲುವೆ ಗಾಂಧಿ ನಗರ ನಂತರ ಸವಳಂಗ ರಸ್ತೆ ದಾಟುವವರೆಗೂ ಕಾಲುವೆ ಅಗಲ ಸುಮಾರು 15 ಅಡಿಗಳಷ್ಟಿದೆ. ನಂತರ ಈ ಕಾಲುವೆ ಕಿರಿದಾಗುತ್ತಾ ಸಾಗಿದೆ. ಮಳೆಗಾಲುವೆ ಮುಂದೆ ಸಾಗುತ್ತಾ ದೊಡ್ಡದಾಗಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕಿರಿದಾಗುತ್ತಾ ಸಾಗಿದೆ. ಅಮೀರ್ ಅಹಮದ್ ಕಾಲೋನಿಗೆ ಬರುವ ವೇಳೆಗೆ ಇದರ ಅಗಲ ಐದಾರು ಅಡಿ ಮಾತ್ರ.
ಭಾರಿ ಮಳೆಯಾದಾಗ ಒಮ್ಮಿದೊಮ್ಮೆಲೆ ನುಗ್ಗಿ ಬರುವ ನೀರು ಈ ಕಿರಿದಾದ ಮಳೆಗಾಲುವೆಯಲ್ಲಿ ಹೋಗಲು ಅಸಾಧ್ಯವಾದಾಗ ರಸ್ತೆಗೆ, ಒಳಚರಂಡಿಗೆ, ಬಾಕ್ಸ್ ಚರಂಡಿಗೆ ವಾಪಸು ನುಗ್ಗುತ್ತದೆ. ಹೀಗಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಲ್ಲಿರುವ ಕುಟುಂಬಗಳ ಪಜೀತಿ ಹೇಳತೀರದು.
ಮಳೆಗಾಲುವೆಯಲ್ಲಿ ನೀರಿನ ಮಟ್ಟ ಇಳಿಯುವವರೆಗೂ ರಸ್ತೆಯಲ್ಲಿ ನೀರು ಹರಿಯುತ್ತಲೇ ಇರುತ್ತದೆ. ಕಾಲುವೆಯಲ್ಲಿ ನೀರಿಳಿದರೂ ಮನೆಯ ಒಳಗೆ ಸೇರಿರುವ ನೀರು ಹೋಗುವುದಿಲ್ಲ. ಇದನ್ನು ಬಕೆಟ್‌ನಿಂದ ಎತ್ತಿ ಹಾಕಲೇಬೇಕು. ಇದರಿಂದಾಗಿ ಅಮೀರ್ ಅಹಮದ್ ಕಾಲೋನಿ ಜನ್ನತ್ ಗಲ್ಲಿಯ ನಿವಾಸಿಗಳಂತೂ ಕೆಂಗೆಟ್ಟು ಹೋಗಿದ್ದಾರೆ. ಇದಕ್ಕಿರುವ ಪರಿಹಾರ ಒಂದೇ. ಮಳೆಗಾಲುವೆ ಒತ್ತುವರಿ ತೆರವು ಮಾಡಿ, ಹಿರಿದಾಗಿಸುವುದು. ಜತೆಗೆ ರೈಲು ನಿಲ್ದಾಣದ ಎದುರಿನಿಂದ ಹಾದುಹೋಗುವಂತೆ ಮಾಡುವುದು. ಅದು ಅಷ್ಟು ಸುಲಭವೇ..?