ಮೆಗ್ಗಾನ್ ಅವ್ಯವಸ್ಥೆ ತಿದ್ದಿಕೊಳ್ಳಲು 15 ದಿನ ಗಡುವು
ಶಿವಮೊಗ್ಗ: ಕಾರಿಡಾರ್‌ನಲ್ಲೇ ಮಲಗಿದ್ದ ರೋಗಿಗಳು, ಸ್ವಚ್ಛತೆ ಇಲ್ಲದ ಹಾಸಿಗೆಗಳು, ಹೊರಗಿನಿಂದ ಔಷಧಿ ತರುವಂತೆ ಬರೆದುಕೊಟ್ಟ ಚೀಟಿಗಳು, ಕೊಳೆತು ನಾರುತ್ತಿದ್ದ ಶೌಚಾಲಯಗಳು...
ಮಂಗಳವಾರ ಮೆಗ್ಗಾನ್ ಆಸ್ಪತ್ರೆಯ ಈ ಕಟು ಸತ್ಯದ ದಿಗ್ಧರ್ಶನ ಮಾಡಿದ್ದು ನೂತನ ಶಾಸಕ ಕೆ.ಬಿ. ಪ್ರಸನ್ನಕುಮಾರ್. ಸಾರ್ವಜನಿಕರ ದೂರಿನ ಮೇರೆಗೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕರು, ಅಲ್ಲಿನ ಅವ್ಯವಸ್ಥೆಯನ್ನು ಒಂದೊಂದಾಗಿ ಗಮನಿಸುತ್ತಾ ಹೋದರು. ಶಾಸಕರ ಏಕಾಏಕಿ ಪ್ರವೇಶದಿಂದ ಅಲ್ಲಿನ ಸಿಬ್ಬಂದಿ ಗಲಿಬಿಲಿಕೊಂಡು ಅವ್ಯವಸ್ಥೆಗೆ ಮುಸುಕು ಹೊದಿಸುವ ಪ್ರಯತ್ನ ನಡೆಸಿದರು.
ಅಧಿಕಾರಿಗಳಿಗೆ ಸೂಚನೆ: ಶಾಸಕರು ಆಸ್ಪತ್ರೆಗೆ ಪ್ರವೇಶವಾಗುತ್ತಿದ್ದಂತೆ ಕಂಡಿದ್ದು ಕಾರಿಡಾರ್‌ನಲ್ಲಿ ಮಲಗಿಸಿದ್ದ ರೋಗಿಗಳನ್ನು, ಏಕೆ ಹೀಗೆ ಎಂದು ಪ್ರಶ್ನಿಸಿದರೆ ಸಿಬ್ಬಂದಿ ಬಳಿ ಉತ್ತರವಿಲ್ಲ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಶಾಸಕರು ಸೂಚನೆ ನೀಡಿದರಲ್ಲದೇ, ರೋಗಿಗಳನ್ನು ಮಳೆಗಾಳಿಯಿಂದ ರಕ್ಷಣೆ ಇಲ್ಲದೇ ಕಾರಿಡಾರ್‌ನಲ್ಲಿ ಮಲಗಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆ-ಮಕ್ಕಳ ವಾರ್ಡ್‌ಗೆ ಭೇಟಿಕೊಟ್ಟ ಪ್ರಸನ್ನಕುಮಾರ್, ರೋಗಿಗಳ ಆರೋಗ್ಯ ವಿಚಾರಿಸಿದರು. ಅದೇ ರೀತಿ ಅಲ್ಲಲ್ಲಿ ಕಂಡ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚೀಟಿ ಕೊಡುವ ಸಂಗತಿ: ಆಸ್ಪತ್ರೆ ಹೊರಗಿನ ಖಾಸಗಿ ಮೆಡಿಕಲ್ ಶಾಪ್‌ಗಳಿಂದ ಔಷಧಿ ತರುವಂತೆ ವೈದ್ಯರು ರೋಗಿಗಳಿಗೆ ಚೀಟಿ ಕೊಡುವ ಸಂಗತಿ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂತು. ಇಲ್ಲಿನ ರೋಗಿಯೊಬ್ಬರು ಈ ಸಂಗತಿಯನ್ನು ಶಾಸಕರ ಗಮನಕ್ಕೆ ತಂದರು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ತರಾತುರಿ ಸ್ವಚ್ಛತೆ: ಮಹಿಳೆಯರ ವಾರ್ಡ್‌ನ ಶೌಚಾಲಯದ ಅವ್ಯವಸ್ಥೆ, ವಿದ್ಯುತ್ ದೀಪಗಳ ಅಸಮರ್ಪಕ ನಿರ್ವಹಣೆಯೂ ಈ ಸಂದರ್ಭದಲ್ಲಿ ಬೆಳಕಿಗೆ ಬಂತು. ಹಾಗೆಯೇ ಶಾಸಕರ ದಿಢೀರ್ ಭೇಟಿಯಿಂದಾಗಿ ಗಲಿಬಿಲಿಗೊಂಡ ಸಿಬ್ಬಂದಿ ಸ್ವಚ್ಛತೆ ಮಾಡಲು ಮುಂದಾದರು. ತರಾತುರಿಯಲ್ಲಿ ಶೌಚಾಲಯ ತೊಳೆದರು, ಹಾಸಿಗೆಗೆ ಹಾಸಿದ್ದ ಬೆಡ್‌ಶೀಟ್ ಬದಲಿಸಿದ್ದು ಕಂಡುಬಂತು. ಇದೇ ಸಂದರ್ಭದಲ್ಲಿ ಪ್ರಸನ್ನಕುಮಾರ್, ಆಸ್ಪತ್ರೆಯ ಅಡುಗೆ ಮನೆ, ಔಷಧ ದಾಸ್ತಾನು ಕೊಠಡಿಗಳಿಗೂ ಭೇಟಿಕೊಟ್ಟು ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡಿದರು.
ಪರಿಶೀಲನೆ: ಭೇಟಿ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಮೆಗ್ಗಾನ್ ಆಸ್ಪತ್ರೆಯ ನಿರ್ವಹಣೆ ಹಾಗೂ ಸಿಬ್ಬಂದಿ ವರ್ತನೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ದೂರುಗಳು ಹಾಗೂ ವಾಸ್ತವ ಸಂಗತಿಗಳಲ್ಲಿ ಸತ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಅಗತ್ಯ ಕ್ರಮಕ್ಕೆ ಸೂಚಿಸಲಾಯಿತು ಎಂದರು.
ಇನ್ನು 15 ದಿನಗಳೊಳಗೆ ಆಸ್ಪತ್ರೆಯ ಸಮಸ್ಯೆಗಳು ಬಗೆಹರಿಸಬೇಕೆಂದು ಸೂಚಿಸಲಾಗಿದೆ, ನಂತರ ಪುನಃ ಭೇಟಿ ನೀಡಿ ಪರಿಶೀಲಿಸುತ್ತೇನೆ. ವ್ಯವಸ್ಥೆ ಸರಿ ಮಾಡುವ ಜವಾಬ್ದಾರಿ ನನ್ನದು ಎಂದರು. ರೋಗಿಗಳ ಸಮಸ್ಯೆ ಜೊತೆಗೆ ಆಸ್ಪತ್ರೆ ಸಿಬ್ಬಂದಿ ಸಮಸ್ಯೆಯನ್ನು ಗಮನಿಸಲಾಯಿತು. ದಿಢೀರ್ ಭೇಟಿಯಿಂದ ಆಸ್ಪತ್ರೆಯ ನೈಜ ಚಿತ್ರಣ ತಿಳಿಯಿತು. ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜನಸ್ನೇಹಿ ಆಸ್ಪತ್ರೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕರೊಂದಿಗೆ ನಗರಸಭಾ ಸದಸ್ಯ ವಿಶ್ವನಾಥ, ವೈದ್ಯಾಧಿಕಾರಿ ಡಾ. ಲೇಪಾಕ್ಷಿ, ಡಾ. ಶಿವಯೋಗಿ ಮತ್ತಿತರರು ಇದ್ದರು.