ರೈತರಿಗೆ ಹಕ್ಕುಪತ್ರ ಕೊಡಲು ಒಕ್ಕೊರಲ ಆಗ್ರಹ
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 28
ಆಡಳಿತ ನಡೆಸುವವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಲವು ವರ್ಷಗಳಿಂದ ಶಾಲಾ ಭೂ- ವಿದ್ಯಾದಾನದ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೆ ಹಕ್ಕುಪತ್ರ ದೊರೆತಿಲ್ಲ ಎಂದು ರಾಜ್ಯ ಭೂ- ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಥುರಾ ಪ್ಯಾರಾಡೈಸ್ನಲ್ಲಿ ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಮಂಗಳವಾರ ಆಯೋಜಿಸಿದ್ದ ಶಾಲಾ ಜಮೀನು ಗೇಣಿ ರೈತರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದೆಲ್ಲೆಡೆ ಅಧಿಕಾರಿಗಳು ಭೂ- ವಿದ್ಯಾದಾನದ ಜಮೀನುಗಳನ್ನು ಹರಾಜು ಹಾಕುತ್ತಿದ್ದು, 1995ರ ಸುತ್ತೋಲೆ ಪ್ರಕಾರ ಅವರು ಈ ತೀರ್ಮಾನ ತೆಗೆದುಕೊಂಡಿದ್ದು, ಇದರಿಂದ ರೈತರು ಬೀದಿ ಪಾಲಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಶಾಲೆಯಿಂದ ದೂರವಿದ್ದು ಶಾಲೆಗೆ ಸೇರಿರುವ ಜಮೀನನನ್ನು 1950ರಿಂದ ಹಲವು ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರ್ಕಾರಗಳು ದ್ವಂದ್ವ ನೀತಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ, ಕೆಲವು ದಿನಗಳ ಹಿಂದೆ ಚಿತ್ರದುರ್ಗದ ಜಿಲ್ಲಾಧಿಕಾರಿಯವರು ಶಾಲಾ ಜಮೀನಲ್ಲಿ ಉಳುಮೆ ಮಾಡುತ್ತಿದ್ದ ಜಮೀನನ್ನು ವಶಪಡಿಸಿಕೊಂಡು ಆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡುವುದರೊಂದಿಗೆ ರೈತರನ್ನು ಕಡೆಗಣಿಸಿದಂತಾಗಿದೆ ಎಂದರು.
ಹುಸಿಯಾದ ಭರವಸೆ: 2002ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದ ಕಾಗೋಡು ಸತ್ಯಾಗ್ರಹದ ಸುವರ್ಣ ಮಹೋತ್ಸವದ ಕಾರ್ಯಕ್ರಮಕ್ಕೆ ಹಾಜರಾದ ಸಂದರ್ಭದಲ್ಲಿ ಶಾಲಾ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಪರವಾದ ತೀರ್ಮಾನಕೈಗೊಳ್ಳುವುದಾಗಿ ತಿಳಿಸಿದ್ದರು. ಅದು ಕೂಡ ಈಡೇರಿಲ್ಲ ಎಂದು ದೂರಿದರು.
ರಾಘವೇಂದ್ರರನ್ನು ಸೋಲಿಸಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ರೈತರಿಗೆ ಜಮೀನು ನೀಡುವುದಾಗಿ ಭರವಸೆ ನೀಡಿದ್ದರು. ಅವರ ಮಗ ಸಂಸದ ಬಿ.ವೈ. ರಾಘವೇಂದ್ರ ಕೂಡ ತಂದೆಯೊಂದಿಗೆ ಮಾತನಾಡಿ ನಿಮಗೆ ಪರಿಹಾರ ಸೂಚಿಸುತ್ತೇನೆ ಎಂದು ತಿಳಿಸಿದ್ದರು. ಆದರೆ, ಯಾವ ತೀರ್ಮಾನ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ. ಆದರಿಂದ ಸಂಸದ ಬಿ.ವೈ. ರಾಘವೇಂದ್ರ ಯಾವುದೇ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಸೋಲಿಸಿ ಎಂದು ಮನವಿ ಮಾಡಿದರು.
ರೈತ ಮುಖಂಡ ಕಡಿದಾಳ್ ಶಾಮಣ್ಣ ಮಾತನಾಡಿ, ಇದುವರೆಗೂ 6 ಸರ್ಕಾರಗಳು ಅಧಿಕಾರ ನಡೆಸಿವೆ. ಆದರೆ, ಭೂ- ವಿದ್ಯಾದಾನದ ಜಮೀನು ಮಾಡುತ್ತಿರುವ ರೈತರ ಸಮಸ್ಯೆ ಪರಿಹಾರವಾಗಿಲ್ಲ. ಈ ಸಮಸ್ಯೆಯ ಪರಿಹಾರಕ್ಕಾಗಿ ಆಡಳಿತ ನಡೆಸಿದ ಸರ್ಕಾರಗಳು ಮುಂದೆ ಹೋದರೂ ಯಾವ ಪರಿಹಾರವು ಸಿಕ್ಕಿಲ್ಲ. ಸರ್ಕಾರ ನಡೆಸುವವರು ಒಪ್ಪಿಗೆ ದೊರೆತರೂ ಅಧಿಕಾರಿ ವಲಯ ಇದಕ್ಕೆ ಕೊಕ್ಕೆ ಹಾಕುತ್ತಿದೆ ಎಂದ ಅವರು, ವಕೀಲರು, ಕಾನೂನು ತಜ್ಞರು ಶಾಲಾ ಜಮೀನು ಉಳುಮೆ ಮಾಡುತ್ತಿರುವವರಿಗೆ ಮಂಜೂರು ಮಾಡಬಹುದು ಎಂದು ಹೇಳುತ್ತಿದ್ದರೂ ಅಧಿಕಾರಿಗಳು ನೀಡುತ್ತಿಲ್ಲ ಎಂದರು.
ಹೋರಾಟ ಅಗತ್ಯ: ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಉಳುವವನೆ ಹೊಲದೊಡೆಯ ಕಾನೂನು ಜಾರಿ ಸಂದರ್ಭದಲ್ಲಿ ತೋರಿದ ಆತುರ ಮತ್ತು ನಿರ್ಲಕ್ಷ್ಯದಿಂದಾಗಿ ಭೂ ವಿದ್ಯಾದಾನ ಜಮೀನು ಉಳುವವರಿಗೆ ಮಂಜೂರಾಗಲಿಲ್ಲ. ಕಳೆದ 50 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರು ಇನ್ನೂ ಹಾಗೆಯೇ ಉಳಿದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನಷ್ಟು ಶಕ್ತಿಯುತವಾದ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ವಕೀಲೆ ಮಂಜುಳಾದೇವಿ, ಸಮಿತಿ ಕಾರ್ಯದರ್ಶಿಬಿ. ಸ್ವಾಮಿರಾವ್, ಡಾ. ಚಿಕ್ಕಸ್ವಾಮಿ, ಆರ್.ಎ. ಚಾಬುಸಾಬ್ ಮತ್ತಿತರರು ಇದ್ದರು.
ನಾಚಿಕೆ ಆಗ್ಬೇಕು...
ಸರ್ಕಾರ ಮತ್ತು ಬಗರ್ ಹಕುಂ ಸಾಗುವಳಿ ರೈತರ ಪರ ಹೋರಾಟ ಮಾಡುತ್ತೇನೆ ಎಂದು ಹೇಳುವ 82 ವರ್ಷ ವಯಸ್ಸಾಗಿರುವ ಕಾಗೋಡು ತಿಮ್ಮಪ್ಪ ಅವರಿಗೆ ಈ ವಿಷಯದಲ್ಲಿ ನಾಚಿಕೆಯಾಗಬೇಕು.
ಗೋಪಾಲಗೌಡರ ಶಿಷ್ಯ ಎಂದು ಹೇಳಿಕೊಳ್ಳುವ ಕಾಗೋಡು ತಿಮ್ಮಪ್ಪ ಅವರ ಎದುರಿನಲ್ಲಿಯೇ ಇಂತಹ ಅನ್ಯಾಯ ನಡೆಯುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ.
ಇಷ್ಟು ವರ್ಷಗಳ ಕಾಲ ಅಧಿಕಾರ ಹೊಂದಿದ ತಿಮ್ಮಪ್ಪ ಅವರು, ಶಾಸಕರಾಗಿ, ಮಂತ್ರಿಗಳಾಗಿ ಈ ಸಮಸ್ಯೆ ಬಗೆಹರಿಸದಿರುವುದು ವಿಪರ್ಯಾಸ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಲ್ಲೂರು ಮೇಘರಾಜ್ ಗುಡುಗಿದರು. ಕಾಗೋಡು ತಿಮ್ಮಪ್ಪ ಅವರಿಗೆ ರೈತರ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ, ಸಮಿತಿ ಸದಸ್ಯರನ್ನು ಆಹ್ವಾನಿಸಿ ಪರಿಹಾರ ಸೂಚಿಸಬೇಕು ಎಂದ ಅವರು, ಹಿಂದಿನಿಂದಲೂ ನಮ್ಮ ಹೋರಾಟ ಬೆಂಬಲಿಸುತ್ತಿದ್ದ ನಾಯಕರೆಲ್ಲ ಮಂತ್ರಿ, ಶಾಸಕರಾಗಿದ್ದಾರೆ.
ಆದರೆ ಸಮಸ್ಯೆ ಮಾತ್ರ ಪರಿಹಾರವಾಗಲಿಲ್ಲ. ಇನ್ನಾದರೂ ಸಮಸ್ಯೆ ಬಗೆಹರಿಯಬೇಕು ಎಂಬುದು ನಮ್ಮ ಆಗ್ರಹ ಎಂದವರು ಹೇಳಿದರು.
--