ಸಾವಿನ ಕುಣಿಕೆಯಿಂದ ಮಕ್ಕಳು ಪಾರು
ಕ.ಪ್ರ.ವಾರ್ತೆ ಶಿವಮೊಗ್ಗ ಮೇ 28 ತಂದೆಯೊಡ್ಡಿದ್ದ ಸಾವಿನ ಬಲೆಯಿಂದ ಪವಾಡ ಸದೃಶ್ಯ ರೀತಿಯಲ್ಲಿ ಮಕ್ಕಳು ಪಾರಾಗಿ ಬಂದಿರುವ ವಿಚಿತ್ರ ಪ್ರಕರಣವೊಂದು ನಡೆದಿದೆ. ಮದ್ಯದ ಅಮಲಿನಲ್ಲಿ ತಂದೆಯೋರ್ವ ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ, ಕತ್ತು ಹಿಸುಕಿ ಕೊಲೆ ಮಾಡಲು ವಿಫಲಯತ್ನ ನಡೆಸಿದ್ದಾನೆ. ನಂತರ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಸಂಗ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ.
ವೆಂಕಟೇಶ ನಗರ ಬಡಾವಣೆಯ 3ನೇ ತಿರುವಿನ ವಾಸಿ, ಬಾರ್ ಬೈಂಡಿಂಗ್ ಕಾರ್ಮಿಕ ಶ್ರೀನಿವಾಸ್ (35) ಸಾವುಕಂಡವರು. ಇವರ ಮಕ್ಕಳಾದ ಪುನಿತ್ (8) ಹಾಗೂ ದಯಾನಂದ್ (6) ಸಾವನ್ನು ಗೆದ್ದು ಬಂದ ಮಕ್ಕಳಾಗಿದ್ದಾರೆ. ಈ ಇಬ್ಬರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಘಟನೆ ಹಿನ್ನೆಲೆ: ಶ್ರೀನಿವಾಸ ಮದ್ಯ ವ್ಯಸನಿಯಾಗಿದ್ದು, ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಆಗಮಿಸಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದಾರೆ, ಜೊತೆಗೆ ಹಲ್ಲೆ ನಡೆಸಿದ್ದಾರೆ. ಗಂಡನ ವರ್ತನೆಯಿಂದ ಬೇಸತ್ತ ಪತ್ನಿ ಇಬ್ಬರು ಮಕ್ಕಳನ್ನು ಬಿಟ್ಟು ಹೊಸಮನೆ ಬಡಾವಣೆಯಲ್ಲಿರುವ ತವರು ಮನೆಗೆ ತೆರಳಿದ್ದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಶ್ರೀನಿವಾಸ್ ತಾನು ತಂದಿದ್ದ ವಿಷವನ್ನು ಇಬ್ಬರು ಮಕ್ಕಳಿಗೂ ಬಲವಂತವಾಗಿ ಕುಡಿಸಿ ಕೊಲ್ಲಲು ಮುಂದಾಗಿದ್ದಾನೆ. ಮಕ್ಕಳು ಪರಿಪರಿಯಾಗಿ ಬೇಡಿಕೊಂಡರು ಈತನ ಮನಸ್ಸು ಕರಗಿಲ್ಲ. ಆದರೆ ತಂದೆಯ ಕೈಯಿಂದ ಮಕ್ಕಳು ತಪ್ಪಿಸಿಕೊಂಡಿದ್ದಾರೆ. ಆದಾಗ್ಯೂ ಓರ್ವ ಮಗನನ್ನು ಹಿಡಿದು ಕತ್ತು ಹಿಸುಕಿ ಕೊಲೆ ಮಾಡಲು ವಿಫಲಯತ್ನ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಕ್ಕಳ ಪಾರು: ಅದೃಷ್ಟವಶಾತ್ ಇಬ್ಬರು ಮಕ್ಕಳು ತಂದೆಯ ಸಾವಿನ ಕುಣಿಕೆಯಿಂದ ಪಾರಾಗಿ ಕೋಣೆಯೊಂದರಲ್ಲಿ ಅಡಗಿ ಕುಳಿತ್ತಿದ್ದಾರೆ. ಹಾಗೆಯೇ ಬಳಲಿ ಅಲ್ಲೇ ನಿದ್ರೆಗೆ ಜಾರಿದ್ದಾರೆ. ಮಂಗಳವಾರ ಬೆಳಿಗ್ಗೆ ಪತ್ನಿ ತವರು ಮನೆಯಿಂದ ಪತಿ ಮನೆಗೆ ಆಗಮಿಸಿದಾಗ ಪತಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಹಾಗೂ ಜೊತೆಗೆ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಸಾಯಿಸಲು ಯತ್ನಿಸಿದ ವೃತ್ತಾಂತ ಗೊತ್ತಾಗಿದೆ.
ಮಕ್ಕಳ ಮೈಯಿಂದ ವಿಷದ ಘಾಟು ಬರುತ್ತಿದ್ದರಿಂದ ಆಕೆ ಕೂಡಲೇ ನೆರೆಹೊರೆಯ ನೆರವಿನೊಂದಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜಯನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಭರತ್ಕುಮಾರ್ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.