ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರ್ಧಗಂಟೆಯಲ್ಲಿ ದರೋಡೆಕೋರರ ಬಂಧನ

Lingaraj Badiger
Updated On : 30 May 2013, 10:48 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಮೇ 29
ಉದ್ಯಮಿ ಮೇಲೆ ಹಲ್ಲೆ ನಡೆಸಿ ನಗನಾಣ್ಯ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಘಟನೆ ನಡೆದ ಅರ್ಧಗಂಟೆಯಲ್ಲಿಯೇ ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ವಿನಾಯಕ ನಗರ ಬಡಾವಣೆಯ ಬಾಬು (34) ಹಾಗೂ ಸಂತೆಕಡೂರು ಗ್ರಾಮದ ಮಂಜುನಾಥ್ (27) ಬಂಧಿತ ಆರೋಪಿಗಳು. ಇವರಿಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೂಲತಃ ಬೆಂಗಳೂರಿನ ಉದ್ಯಮಿ ಮಹೇಶ್ ಕಾರ್ಯನಿಮಿತ್ತ ಸಂತೆಕಡೂರು ಗ್ರಾಮಕ್ಕೆ ತಮ್ಮ ಕಾರಿನಲ್ಲಿ ಆಗಮಿಸಿದ್ದಾರೆ. ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಎಂಆರ್‌ಎಸ್ ವೃತ್ತದ ಸಮೀಪವಿರುವ ನಿರ್ಜನ ಪ್ರದೇಶದಲ್ಲಿ ಮಾತನಾಡುತ್ತಾ ಕುಳಿತಿದ್ದರು.
ಈ ವೇಳೆ ಬೈಕ್‌ನಲ್ಲಿ ಆರೋಪಿಗಳು ಅಲ್ಲಿಗೆ ಆಗಮಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ನಂತರ ಮಹೇಶ್ ಬಳಿ ಇದ್ದ ಮೊಬೈಲ್, ಬಂಗಾರದ ಸರ, ನಗದು ಕಸಿದು ಪರಾರಿಯಾದರು. ತಕ್ಷಣ ಈ ವಿಷಯವನ್ನು ಮಹೇಶ್ ಪೊಲೀಸರ ಗಮನಕ್ಕೆ ತಂದಿದ್ದರು. ಆರೋಪಿಗಳ ಕುರಿತಂತೆ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು.
ಗಸ್ತಿನಲ್ಲಿದ್ದ ಕೋಟೆ ಠಾಣೆಯ ಪೊಲೀಸ್ ಸಿಬ್ಬಂದಿಯಾದ ಕಾಶೀನಾಥ್, ಚಂದ್ರಾನಾಯ್ಕ್ ಹಾಗೂ ಪೂರ್ಣೇಶ್ ಇದ್ದ ತಂಡ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಗಳನ್ನು ಗುರುತಿಸಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದರಾದರೂ ಪೊಲೀಸರು ಅವರನ್ನು ಖೆಡ್ಡಾಕ್ಕೆ ಬೀಳಿಸಿಕೊಳ್ಳಲು ಸಫಲರಾದರು.
ಬಂಧಿತರಿಂದ 40 ಸಾವಿರ ರುಪಾಯಿ ಮೌಲ್ಯದ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಆಭರಣ ಕಳವು
ಭದ್ರಾವತಿ: ಶಿವಮೊಗ್ಗ ಮೂಲದ ಕುಸುಮ ಎಂಬವರು ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗಲು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಸುಮಾರು 116 ಗ್ರಾಂ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋಗುವಾಗ ಭದ್ರಾವತಿಯಲ್ಲಿ ಶೌಚಾಲಯಕ್ಕೆ ಹೋಗಿ ಬಂದು ವ್ಯಾನಿಟಿ ಬ್ಯಾಗ್ ಪರಿಶೀಲಿಸಿದ್ದು, ಕಳ್ಳರು ಒಡವೆಗಳನ್ನು ಕಳವು ಮಾಡಿರುವುದು ಕಂಡುಬಂದಿದ್ದು ಅವರು ನ್ಯೂಟೌನ್ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement