ಬಿರುಕು ಬಿಟ್ಟ ಭೂಮಿ: ಆತಂಕದಲ್ಲಿ ಜನತೆ
ಕ.ಪ್ರ.ವಾರ್ತೆ ಸಾಗರ ಮೇ 29
ತಾಲೂಕಿನ ಆನಂದಪುರಂ ಸಮೀಪದ ಆಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಲಕ್ಕವಳ್ಳಿ ಗ್ರಾಮದ ಸ.ನಂ. 31 ರಿಂದ 37ರೊಳಗಿನ ಶಾಂತಪ್ಪ ಗೌಡ, ಶಾಂತವೀರಪ್ಪ ಗೌಡ, ಬಡಿಯಪ್ಪ, ನಾಗಪ್ಪ ಸಂಪಳ್ಳಿ, ದೇವರಾಜ ಗೌಡ ಎಂಬುವವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಭೂಮಿ ಬಿರುಕು ಬಿಟ್ಟಿದೆ. ಮಂಗಳವಾರ ರಾತ್ರಿ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆ ಬಂದಿದ್ದರಿಂದ ಈ ಬಿರುಕು ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಸುಮಾರು 1 ಕಿ.ಮೀ. ನಷ್ಟು ಉದ್ದಕ್ಕೆ ಭೂಮಿ ಬಿರುಕು ಬಿಟ್ಟಿದ್ದು, ಮೂರರಿಂದ ನಾಲ್ಕು ಇಂಚಿನಷ್ಟು ಭೂಮಿ ಬಾಯ್ಬಿಟ್ಟಿದೆ. ಬಾಯ್ಬಿಟ್ಟ ಜಾಗದೊಳಗೆ ಕೋಲು ಹಾಕಿದರೆ ಸುಮಾರು 5 ಅಡಿಯಷ್ಟು ಒಳಗೆ ಹೋಗುತ್ತಿದೆ.
ಬೆಳಿಗ್ಗೆ ಜಮೀನಿಗೆ ಬಂದಾಗ ಭೂಮಿ ಬಿರುಕು ಬಿಟ್ಟಿರುವುದು ಕಂಡು ಬಂದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ನಂದ್ಯಪ್ಪ, ಚಂದ್ರಮೌಳಿ ಭೇಟಿ ನೀಡಿದ್ದಾರೆ. ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.