ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲೋಕಾ ಬಲೆಗೆ ಅಬ್ಕಾರಿ ಡಿವೈಎಸ್ಪಿ

Lingaraj Badiger
Updated On : 30 May 2013, 10:49 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಮೇ 29
ಮದ್ಯದ ಅಂಗಡಿ ಪರವಾನಗಿ ವರ್ಗಾವಣೆಗೆ ಕುರಿತಂತೆ ಮದ್ಯದಂಗಡಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಅಬಕಾರಿ ಇಲಾಖೆಯ ಡಿವೈಎಸ್ಪಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದ ಪ್ರಸಂಗ ಶಿವಮೊಗ್ಗದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವೆಂಕಟೇಶಮೂರ್ತಿ ಬಂಧಿತ ಅಧಿಕಾರಿ. ಲೋಕಾಯುಕ್ತ ಡಿವೈಎಸ್ಪಿ ಶಿವಕುಮಾರ್, ಇನ್ಸ್‌ಸ್ಪೆಕ್ಟರ್ ಸಮೀವುಲ್ಲಾ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿ, ಲಂಚಕೋರ ಅಧಿಕಾರಿಯನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಸಫಲವಾಯಿತು.
1 ಲಕ್ಷ ಲಂಚಕ್ಕೆ ಬೇಡಿಕೆ: ನಗರದ ಸವಳಂಗ ರಸ್ತೆಯಲ್ಲಿರುವ ಮೂಲ ಮದ್ಯದ ಅಂಗಡಿ ಮಾಲೀಕ ಭಾಸ್ಕರ್ ಬಾಬು ಎಂಬುವರು ಹೊಸನಗರದಲ್ಲಿ ಮದ್ಯದ ಅಂಗಡಿ ಖರೀದಿಸಿದ್ದರು. ಇದನ್ನು ತಮ್ಮ ಪುತ್ರ ರಾಹುಲ್ ಹೆಸರಿಗೆ ಮಾಡಿಸಲು ನಿರ್ಧರಿಸಿದ್ದರು. ಈ ಸಂಬಂಧ ಡಿವೈಎಸ್‌ಪಿ ವೆಂಕಟೇಶಮೂರ್ತಿಯನ್ನು ಸಂಪರ್ಕಿಸಿದ್ದು, 1 ಲಕ್ಷ ಲಂಚ ನೀಡಿದರೆ ವರ್ಗಾವಣೆ ಮಾಡಿಕೊಡುವುದಾಗಿ ಡಿಮ್ಯಾಂಡ್ ಮಾಡಿದ್ದಾರೆ.
ಈ ವಿಷಯವನ್ನು ಭಾಸ್ಕರರಾವ್ ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದಾರೆ. ಲೋಕಾಯುಕ್ತ ಪೊಲೀಸರ ಮಾರ್ಗದರ್ಶನದಂತೆ ಭಾಸ್ಕರ್‌ರಾವ್ ವೆಂಕಟೇಶಮೂರ್ತಿಗೆ ಬುಧವಾರ ಹಣ ನೀಡಲು ಮುಂದಾಗಿದ್ದಾರೆ. ವೆಂಕಟೇಶಮೂರ್ತಿಯ ಮನೆ ಸವಳಂಗ ರಸ್ತೆಯಲ್ಲಿರುವ ಅಶ್ವತ್ಥ ನಗರ ಬಡಾವಣೆಯಲ್ಲಿದ್ದು ಮದ್ಯದ ಅಂಗಡಿಗೆ ಆಗಮಿಸಿ ಹಣ ಪಡೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಬೆಳಿಗ್ಗೆ 10.45ರ ಸುಮಾರಿಗೆ ಆಗಮಿಸಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ತಂಡ ಹಣದ ಸಮೇತ ಅಧಿಕಾರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
1ಲಕ್ಷ ಲಂಚದ ಹಣವನ್ನು ಅಬಕಾರಿ ಡಿಸಿಯವರಿಗೆ ನೀಡಿದರೆ ಮಾತ್ರ ಪರವಾನಗಿ ವರ್ಗಾವಣೆಯಾಗಲಿದೆ ಎಂದು ಲೋಕಾಯುಕ್ತ ಪೊಲೀಸರಿಗೆ ಸೆರೆ ಸಿಕ್ಕ ಅಧಿಕಾರಿ ವೆಂಕಟೇಶಮೂರ್ತಿ ಅಂಗಡಿ ಮಾಲೀಕ ಭಾಸ್ಕರ್‌ರಾವ್‌ಗೆ ಈ ಮುಂಚೆ ತಿಳಿಸಿದ್ದರು ಎನ್ನಲಾಗಿದೆ. ಒಟ್ಟಾರೆ ಅಬಕಾರಿ ಇಲಾಖೆಯ ಮಿಕವೊಂದು ಲೋಕಾಯುಕ್ತ ಬಲೆಗೆ ಬಿದ್ದಂತಾಗಿದ್ದು, ಇಲಾಖೆಯ ಕಾರ್ಯವೈಖರಿ ಮೇಲೆ ಅನುಮಾನ ಹುಟ್ಟುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement