ಅಡಕೆ ಚೊಗರಿನ ಬಣ್ಣದ ಬಟ್ಟೆಗೆ ಬಹು ಬೇಡಿಕೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 30
ಅಂತೂ ರಾಜ್ಯದಲ್ಲೂ ಗುಟ್ಕಾ ನಿಷೇಧವಾಗುವ ಕಾಲ ಹತ್ತಿರ ಬಂದಿದೆ. ಗುಟ್ಕಾ ಮೇಲೆಯೇ ಬಹುತೇಕ ಅವಲಂಬಿತವಾರಿದ್ದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ದಾರಿ ಕಾಣದೇ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.
ಇಂತಹ ಸಂಕಷ್ಟದ ನಡುವೆಯೂ ಆಶಾಕಿರಣದಂತೆ ಹಲವು ದಾರಿಗಳು ಕಾಣುತ್ತಿವೆ. ಪರ್ಯಾಯ ಬಳಕೆಯ ಹಲವು ಯಶೋಗಾಥೆಗಳು ನಮ್ಮ ಮುಂದಿವೆ. ಅವುಗಳಲ್ಲೊಂದು ಸಾಗರ ತಾಲೂಕು ಭೀಮನಕೋಣೆಯಲ್ಲಿರುವ ಚರಕ ಸಂಸ್ಥೆ ರೂಪಿಸಿರುವ ಬಣ್ಣ.
ಇದು ಅಂತಿಂಥ ಬಣ್ಣವಲ್ಲ. ಸಹಜವಾಗಿ, ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಸಿಗುವ ಅಡಕೆ ಚೊಗರಿನಿಂದ ತಯಾರಿಸಿದ ಬಣ್ಣ. ಕಂದು ಬಣ್ಣದ ಅಂಶ ಹೊಂದಿರುವ ಈ ವಸ್ತುವು ಬಟ್ಟೆಯೊಂದಿಗೆ ಗಾಢವಾಗಿ ಅಂಟಿಕೊಳ್ಳುತ್ತದೆ. ವಿವಿಧ ಶೇಡ್ನಲ್ಲಿಯೂ ಸಹ ಈ ಬಣ್ಣ ಸಿದ್ಧವಾಗುತ್ತದೆ.
ಗುಟ್ಕಾದತ್ತ ಕಣ್ಣು ನೆಟ್ಟು ಎಂದೂ ಕಾಣದಷ್ಟು ಲಾಭ ಕಂಡಿದ್ದ, ಈಗ ಎಂದೂ ಕಾಣದಷ್ಟು ನಷ್ಟಕ್ಕೆ ಸಿದ್ಧವಾಗುತ್ತಿರುವ ಅಡಕೆ ಬೆಳೆಗಾರರ ಎದುರು ಹಲವು ಪರ್ಯಾಯಗಳಿವೆ. ಸರ್ಕಾರ ಈ ದಿಕ್ಕಿನಲ್ಲೂ ಯೋಚಿಸಬೇಕಿದೆ.
ಅಡಕೆ ಪರ್ಯಾಯ ಬಳಕೆಗೆ ಬಣ್ಣ ಉತ್ಪಾದನೆ ಹೊರತುಪಡಿಸಿ ಇನ್ನೂ ಹಲವು ಮಾರ್ಗಗಳಿವೆ. ಔಷಧಿಗಳು ಸಿದ್ಧವಾಗುತ್ತಿವೆ. ಟ್ಯಾನಿಂಗ್ ಉದ್ದೇಶಕ್ಕೆ ಬಳಸಬಹುದು. ಅಡಕೆ ಹಾಳೆಯ ತಟ್ಟೆ, ದೊನ್ನೆ, ಲೋಟಗಳ ಬಳಕೆಯೂ ವ್ಯಾಪಕವಾಗಿದೆ. ಆದರೆ ಮಾರುಕಟ್ಟೆ ತಂತ್ರದಲ್ಲಿ ಯಶಸ್ವಿಯಾಗಿರುವುದು, ವ್ಯಾಪಕ ಬಳಕೆಯಾಗುತ್ತಿರುವು ಚೊಗರಿನಿಂದ ಉತ್ಪಾದನೆಯಾಗಿರುವ ಬಣ್ಣ ಮಾತ್ರ.
ಚರಕ ಯಶಸ್ಸು: ಜವಳಿ ಉದ್ಯಮದಲ್ಲಿ ಅಡಕೆ ಚೊಗರಿನಿಂದ ತಯಾರಿಸಿದ ಬಣ್ಣವನ್ನು ಬಳಸುತ್ತಿರುವ ಏಕೈಕ ಸಂಸ್ಥೆ ಚರಕ. ಇಲ್ಲಿ ಉತ್ಪತ್ತಿಯಾಗುವ ಶೇ.25ರಷ್ಟು ಬಟ್ಟೆಗಳಲ್ಲಿ ಅಡಕೆ ಚೊಗರಿನ ಬಣ್ಣವನ್ನೇ ಬಳಸಲಾಗುತ್ತದೆ.
ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಂಘದಲ್ಲಿ ಹಲವು ವರ್ಷಗಳ ಕಾಲ ಡೈಯಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಂ. ಕುಲಕರ್ಣಿ ಅವರು, ಚೊಗರು ವರ್ಷದ ನಿರ್ದಿಷ್ಟ ಕಾಲದಲ್ಲಿ ಮಾತ್ರ ಸಿಗುತ್ತದೆ. ಆಗ ಬಣ್ಣವನ್ನು ನಾವು ಸಿದ್ಧಪಡಿಸಿಟ್ಟುಕೊಂಡರೆ ಸರ್ವಕಾಲಕ್ಕೂ ಬಳಸಬಹುದು. ಇತರೆ ಬಣ್ಣಕ್ಕಿಂತ ಅಡಕೆ ಚೊಗರಿನ ಬಣ್ಣದ ಉತ್ಪಾದನಾ ವೆಚ್ಚ ಸ್ವಲ್ಪ ಕಡಿಮೆ ಎನ್ನುತ್ತಾರೆ.
ಅಂದಹಾಗೆ ಸಂಪೂರ್ಣ ಮಹಿಳೆಯರೇ ಕೆಲಸ ಮಾಡುವ, ಮಹಾತ್ಮ ಗಾಂಧೀಜಿಯ ಆದರ್ಶಗಳನ್ನು ಹೊಂದಿದ, ಯಂತ್ರ ನಾಗರಿಕತೆಗೆ ಸೆಡ್ಡು ಹೊಡೆದಿರುವ ಭೀಮನಕೋಣೆಯ ಚರಕ ಸಂಸ್ಥೆಯ ರೂವಾರಿ ಖ್ಯಾತ ರಂಗಕರ್ಮಿ, ಸಾಮಾಜಿಕ ಚಿಂತಕ ಪ್ರಸನ್ನ ಅವರು.
ಹಳ್ಳಿಯಲ್ಲಿಯೇ ಹಳ್ಳಿಗರಿಗೆ ಉದ್ಯೋಗ ಸಿಗಬೇಕು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ಉತ್ಪಾದನೆ ಮಾಡಬೇಕು ಎಂಬುದು ಪ್ರಸನ್ನ ಅವರ ಆಶಯ. ಅದಕ್ಕೆ ತಕ್ಕಂತೆ ಚರಕ ರೂಪುಗೊಂಡಿದೆ.
ಬೇಡಿಕೆಯ ಬಣ್ಣ: ಚರಕ ಸಂಸ್ಥೆಯ ಉತ್ಪನ್ನಗಳ ಮಾರಾಟ ಮಾಡುವ ದೇಸಿ ಅಂಗಡಿಗಳು ಬೆಂಗಳೂರು ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿವೆ. ಎಲ್ಲೆಡೆಯೂ ಸಹ ಅಡಕೆ ಚೊಗರಿನ ಬಣ್ಣ ಬಳಕೆಯಾಗಿರುವ ಜುಬ್ಬಾ, ಅಂಗಿ, ಕುರ್ತಾ ಇತ್ಯಾದಿ ಉತ್ಪನ್ನಗಳಿಗೆ ಬಹು ಬೇಡಿಕೆ.
ಅಡಕೆ ಚೊಗರಿನ ಮೂಲ ಬಣ್ಣ ಕಂದು. ಇದನ್ನು ಬಟ್ಟೆಗೆ ಬಳಸಲು ಅನುಕೂಲವಾಗುವಂತೆ ಕೆಲವು ನೈಸರ್ಗಿಕ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ವಿವಿಧ ಶೇಡ್ಗಳ ದಾರ ಸಿದ್ಧಪಡಿಸಿ ಕೈಮಗ್ಗದಲ್ಲಿ ಬಟ್ಟೆ ಸಿದ್ಧವಾಗುತ್ತದೆ. ಈ ಬಟ್ಟೆಯ ನಡುವೆ ಬೇರೆ ಬಣ್ಣದ ನೂಲುಗಳನ್ನು ಸೇರಿಸಿ ಹಲವು ವಿನ್ಯಾಸಗಳನ್ನೂ ಸಿದ್ಧಪಡಿಸಲಾಗುತ್ತದೆ.
ಶಿವಮೊಗ್ಗ ದೇಸಿ ಅಂಗಡಿಯ ನಿರ್ವಹಣೆ ಮಾಡುತ್ತಿರುವ ವೀಣಾ ಅವರು, ನಮ್ಮಲ್ಲಿ ಅತಿ ಹೆಚ್ಚು ಖರ್ಚಾಗುವುದು ಅಡಕೆ ಚೊಗರಿನ ಬಣ್ಣದ ಬಟ್ಟೆಗಳೇ. ಕೆಲವು ಬಾರಿ ಸಾವಿರ ಲೆಕ್ಕದಲ್ಲಿ ಸಮವಸ್ತ್ರಗಳನ್ನು ಈ ಬಣ್ಣದ ಬಟ್ಟೆಯಲ್ಲಿ ಸಿದ್ಧಪಡಿಸಿ ಕೊಟ್ಟಿದ್ದೂ ಇದೆ ಎನ್ನುತ್ತಾರೆ.
-ಹೊನ್ನಾಳಿ ಚಂದ್ರಶೇಖರ್