ಗುಟ್ಕಾ ನಿಷೇಧ: ಆತಂಕದಲ್ಲಿ ಗೂಡಂಗಡಿ ವ್ಯಾಪಾರಸ್ಥರು
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 30
ಗುಟ್ಕಾ ಮಾರಾಟ ನಿಷೇಧಿಸ ಬೇಕೋ?.. ಬೇಡವೋ?... ಆದರೆ, ಗುಟ್ಕಾ ನಿಷೇಧ ಮಾಡಿದರೆ ಗೂಡಂಗಡಿಗಳ ವ್ಯಾಪಾರಕ್ಕೆ ಕೊಡಲಿ ಪೆಟ್ಟು ಬೀಳುವುದು ಖಂಡಿತ.
ಹೌದು. ರಾಜ್ಯಾದ್ಯಂತ ಗುಟ್ಕಾ ಮಾರಾಟ ನಿಷೇಧ ಜಾರಿಗೆ ಬಂದರೆ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳ ಸ್ಥಿತಿ ಗಂಭೀರವಾಗಲಿದೆ.
ಜೀವನದಲ್ಲಿ ಬೇರೆಲ್ಲಿಯೂ ಕೆಲಸ ಸಿಗದೇ ಇದ್ದಾಗ ಹೇಗೋ ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು ಸಣ್ಣದೊಂದು ಗೂಡಂಗಡಿ ಇಟ್ಟುಕೊಂಡು ಚಿಕ್ಕ-ಚೊಕ್ಕವಾಗಿ ಬದುಕು ಕಟ್ಟಿಕೊಂಡವರ ಭವಿಷ್ಯವೇ ಅಡಕತ್ತರಿಯಲ್ಲಿ ಸಿಲುಕಲಿದೆ. ಅಷ್ಟೋ- ಇಷ್ಟೋ ಗುಟ್ಕಾದಿಂದ ಲಾಭ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದವರಿಗೆ ಸರ್ಕಾರ ದಿಗ್ಬ್ರಾಂತರನ್ನಾಗಿ ಮಾಡಿದೆ. ಒಂದು ವೇಳೆ ಗುಟ್ಕಾ ನಿಷೇಧ ಜಾರಿಗೆ ಬಂದರೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ಕೆಲ ಯುವಕರು ರೌಡಿಸಂ ಮಾಡಿಕೊಂಡು ಪೊಲೀಸ್, ಕೋರ್ಟ್ ಮೆಟ್ಟಿಲು ಏರಿ ಜೈಲು ಶಿಕ್ಷೆ ಅನುಭವಿಸಿ ಬಂದ ಹತ್ತಾರು ಮಂದಿಗಳು, ಪದವಿ ಪಡೆದು ಎಲ್ಲಿಯೂ ಕೆಲಸ ಸಿಗದೆ ಕೊನೆಗೆ ಕೈ ಸಾಲ ಮಾಡಿಕೊಂಡು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸಿನಿಮಾ ಮಂದಿರಗಳು, ಮಹಲುಗಳ ಆಸುಪಾಸುಗಳಲ್ಲಿ ಗುಟ್ಕಾ ಅಂಗಡಿಗಳನ್ನು ಇಟ್ಟುಕೊಂಡು ಪ್ರತಿನಿತ್ಯ 500 ವ್ಯಾಪಾರ ಮಾಡುತ್ತಿದ್ದ ಯುವಕರಿಗೆ ಸರ್ಕಾರದ ನಿರ್ಧಾರ ಬೇಸರ ತಂದಿದೆ.
ಇವರೇನಂತಾರೇ: ಹೇಗೋ ಬೀಡಾ ವ್ಯಾಪಾರ ಮಾಡುವುದರೊಂದಿಗೆ ಗುಟ್ಕಾ ಕೂಡ ಮಾರಾಟ ನಡೆಯುತ್ತಿತ್ತು. ಚಿಲ್ಲರೆ ವ್ಯಾಪಾರದಲ್ಲಿ ಶೇ.20-30 ರಷ್ಟು ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಇದೀಗ ಅದಕ್ಕೂ ಕುತ್ತು ಬಂದಿದೆ. ಒಂದು ಬ್ರ್ಯಾಂಡ್ನ ಒಂದು ಪ್ಯಾಕ್ ಗುಟ್ಕಾ ಮಾರಾಟ ಮಾಡಿದರೆ ಸುಮಾರು 15-20 ಲಾಭ ಬರುತ್ತಿತ್ತು. ಸುಮಾರು 4-5 ಬ್ರ್ಯಾಂಡ್ ಗುಟ್ಕಾ ಮಾರಾಟ ಮಾಡಿದರೆ ಸುಮಾರು 300 ರಿಂದ 500 ಲಾಭ ಬರುತ್ತಿತ್ತು. ಇದೀಗ ಅದು ಇಲ್ಲದಾಗಿದೆ ಎನ್ನುತ್ತಾರೆ ನಗರದ ಬಿ.ಎಚ್. ರಸ್ತೆಯಲ್ಲಿನ ಬೀಡಾ ಸ್ಟಾಲ್ ಮಾಲೀಕ ಚಲುವರಾಜ್.
ಡಿಗ್ರಿ ಓದಿಕೊಂಡು ಸಂಜೆ ವೇಳೆ ಗೂಡಂಗಡಿ ಇಟ್ಟುಕೊಂಡು ಓದಿನ ಖರ್ಚು ನೋಡಿಕೂಳ್ಳುತ್ತಿದೆ. ಆದರೆ, ಇಂದಿನಿಂದ ಗುಟ್ಕಾ ನಿಷೇಧ ಮಾಡಲಾಗುತ್ತದೆ ಎಂಬ ಸುದ್ದಿ ಕೇಳಿ ಬೇಸರವಾಯಿತು. ಇಲ್ಲಿ ತರಕಾರಿ ಮಾರುಕಟ್ಟೆ ಮತ್ತು ಹೋಟೆಲ್ಗಳಿರುವುದರಿಂದ ದಿನಕ್ಕೆ 400 ರಿಂದ 700ರವರೆಗೆ ಗುಟ್ಕಾದಲ್ಲೇ ವ್ಯಾಪಾರ ನಡೆಯುತ್ತಿತ್ತು. ಅದಕ್ಕೂ ಪೆಟ್ಟು ಬೀಳಲಿದೆ ಎನ್ನುತ್ತಾರೆ ಭದ್ರಾವತಿಯ ಬಿ.ಎಚ್. ರಸ್ತೆಯಲ್ಲಿರುವ ಗೂಡಂಗಡಿಯ ಮಾಲೀಕ ಮಂಜುನಾಥ್.
ಸಗಟು ವ್ಯಾಪಾರದಲ್ಲಿ ನಷ್ಟ: ಸಗಟು ವ್ಯಾಪಾರದಲ್ಲಿ ಶೇ 35-45 ರಷ್ಟು ಲಾಭ ಇತ್ತು. ಆದರೆ, ಸರ್ಕಾರ ಗುಟ್ಕಾ ನಿಷೇಧ ಮಾಡಿದರೆ ಅದು ಕೂಡ ಸ್ಥಗಿತಗೊಳ್ಳಲಿದೆ. ನಾವು ಬೇರೆ ವ್ಯಾಪಾರ ಮಾಡುವುದರಿಂದ ನಮಗೆ ಅಷ್ಟಾಗಿ ಪೆಟ್ಟು ಬೀಳುವುದಿಲ್ಲ. ಆದರೂ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾಗಲಿದೆ ಎನ್ನುತ್ತಾರೆ ನಗರದ ಗಾಂಧಿ ಬಜಾರ್ನ ಸಗಟು ವ್ಯಾಪಾರಿ ಅಂಗಡಿಯೊಂದರ ಮಾಲೀಕ.
-ಮೋಹನ್ ಕುಮಾರ್. ಎನ್