ಗುಟ್ಕಾ ನಿಷೇಧ: ನಾಳೆ ರೈತಸಂಘ ಪ್ರತಿಭಟನೆ
ಶಿವಮೊಗ್ಗ: ಗುಟ್ಕಾ ನಿಷೇಧಕ್ಕೆ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘವು ಪ್ರತಿಭಟನೆ ನಡೆಸಲು ಮುಂದಾಗಿದೆ. ರೈತಸಂಘದ ಮಹಾ ಪ್ರಧಾನಕಾರ್ಯದರ್ಶಿ ಬಸವರಾಜಪ್ಪ ಗುಟ್ಕಾ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರವು ಸಿಗರೇಟು, ಮದ್ಯಪಾನ ನಿಷೇಧಿಸದೇ ಕೇವಲ ಗುಟ್ಕಾ ಉತ್ಪನ್ನಗಳನ್ನು ನಿಷೇಧಿಸಲು ಮುಂದಾಗಿರುವುದು ಸರಿ ಅಲ್ಲ. ರಾಜ್ಯದ 10 ಜಿಲ್ಲೆಗಳಲ್ಲಿ ಲಕ್ಷಾಂತರ ರೈತರು ಇದೇ ಬೆಳೆಯನ್ನು ಅವಲಂಭಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.ಜೂನ್ 1ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಪಾರ್ಕ್ ಬಡಾವಣೆಯ ರೈತಸಂಘ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಅಡಕೆ ಬೆಳೆಗಾರರೆಲ್ಲರೂ ಆಗಮಿಸುವಂತೆ ಅವರು ಕೋರಿದ್ದಾರೆ.
ಡೆಂಘೀಗೆ ಮಹಿಳೆ ಬಲಿ
ಶಿವಮೊಗ್ಗ: ಜಿಲ್ಲೆಯಲ್ಲಿ ಡೆಂಘಿ ತನ್ನ ಅಟ್ಟಹಾಸ ಮೆರೆದಿದ್ದು, ಶುಕ್ರವಾರ ಮಹಿಳೆ ಬಲಿಯಾಗಿದ್ದಾರೆ. ಕಡೂರು ಮೂಲದ ರೀಟಾ (65) ಮೃತಪಟ್ಟವರು. ಒಂದು ವಾರದಿಂದ ಜ್ವರಕ್ಕೆ ಚಿಕಿತ್ಸೆಗೆಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಡೆಂಘಿ ಮುಂಜಾಗ್ರತೆ ಕುರಿತು ಡಿಸಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.