ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಡೆಂಘೀ ನಿಯಂತ್ರಣಕ್ಕೆ ಸೂಚನೆ

Lingaraj Badiger
Updated On : 31 May 2013, 11:11 am

ಕಪ್ರ ವಾರ್ತೆ, ಸಾಗರ, ಮೇ 30
ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲು ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ, ಆರೋಗ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಸಾಗರ, ಹೊಸನಗರ, ಸೊರಬ ಹಾಗೂ ಶಿಕಾರಿಪುರ ತಾಲೂಕು ವ್ಯಾಪ್ತಿಯ ವಿವಿಧ ಅಧಿಕಾರಿಗಳ ಸಭೆಯಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದರು.
ಡೆಂಘೀ ನಿಯಂತ್ರಣಕ್ಕೆ ಸೂಚನೆ: 31ರಿಂದ ಶಾಲೆಗಳ ಪುನರಾರಂಭಗೊಳ್ಳಲಿದ್ದು, ಎಲ್ಲಾ ಶಾಲೆಗಳಲ್ಲಿ ಡೆಂಘೀ ಜಾಗೃತಿ ಕುರಿತು ಮಕ್ಕಳಿಗೆ ಕರಪತ್ರ ವಿತರಿಸುವ ಹಾಗೂ ಶಿಕ್ಷಕರ ಮೂಲಕ ಮಾರಕ ಪರಿಣಾಮ ಕುರಿತು ಜಾಗೃತಿ ಮೂಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಉಪವಿಭಾಗ ವ್ಯಾಪ್ತಿಯ ಎಲ್ಲಾ ಆಸ್ಪತ್ರೆಗಳಲ್ಲೂ ಡೆಂಘೀ, ಚಿಕೂನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಅಗತ್ಯವಾದ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬರುವ ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಒಂದೊಮ್ಮೆ ಮಳೆ, ಸಿಡಿಲಿನಿಂದ ಮನೆ ಬೀಳುವುದು, ಬೆಳೆಹಾನಿ ಇನ್ನಿತರ ಅವಘಡ ಸಂಭವಿಸಿದರೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು. ವರದಿ ಬಂದ 24 ಗಂಟೆಯೊಳಗೆ ಹಾನಿಗೊಳಗಾದವರಿಗೆ ಪರಿಹಾರಧನ ವಿತರಿಸಬೇಕು. ವರದಿ ನೀಡಲು ವಿಳಂಬ ಮಾಡಿದ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪವಿಭಾಗ ವ್ಯಾಪ್ತಿಯಲ್ಲಿ ಪ್ರವಾಹಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಪ್ರವಾಹ ಉಂಟಾದರೆ ಗಂಜೀಕೇಂದ್ರದ ಮೂಲಕ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಸಾಗರದಲ್ಲಿ 08183 220178, ಶಿಕಾರಿಪುರದಲ್ಲಿ 08187 222771, ಹೊಸನಗರ 08185 221005, ಸೊರಬ 08184 272232 ಸಹಾಯವಾಣಿ ತೆರೆಯಲಾಗಿದ್ದು, ಮಳೆಯಿಂದ ಹಾನಿಯುಂಟಾದರೆ ತಕ್ಷಣ ಈ ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳುತ್ತಾರೆ.
ಸಹಾಯವಾಣಿಯಲ್ಲಿ ಸಂಗ್ರಹವಾಗುವ ದೂರುಗಳನ್ನು ಪ್ರತಿದಿನ ತಹಸೀಲ್ದಾರ್ ಕಚೇರಿ ಮೂಲಕ ಪರಿಶೀಲಿಸಿ ಸಂಕಷ್ಟದಲ್ಲಿರುವವರ ನೆರವಿಗೆ ತಾಲೂಕು ಆಡಳಿತ ಧಾವಿಸುತ್ತದೆ ಎಂದು ತಿಳಿಸಿದರು.
ಸಾಗರ ತಹಸೀಲ್ದಾರ್ ಆರ್. ರಾಜಣ್ಣ, ಹೊಸನಗರ ತಹಸೀಲ್ದಾರ್ ಅರ್ಚನಾ, ಶಿಕಾರಿಪುರ ತಹಸೀಲ್ದಾರ್ ಪಿ.ಎಲ್. ಗಣಾಚಾರ್ಯ, ಸೊರಬ ತಹಸೀಲ್ದಾರ್ ತೇಜಸ್‌ಕುಮಾರ್, ಸಾಗರ ನಗರಸಭೆ ಪೌರಾಯುಕ್ತ ಕೆ. ನರಸಿಂಹಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement