ಭದ್ರಾವತಿಯಲ್ಲಿ ಆಗಬೇಕಿದೆ ಸಿದ್ಧತೆ
ಕಪ್ರ ವಾರ್ತೆ, ಶಿವಮೊಗ್ಗ, ಮೇ 30
ಮುಂಗಾರು ಮಳೆ ಈಗಾಗಲೇ ಆರಂಭವಾಗಿದ್ದು, ಹವಾಮಾನ ಇಲಾಖೆ ಕೂಡ ಈ ಬಾರಿ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಆದರೆ, ಭದ್ರಾವತಿಯ ನಗರಸಭೆ ಮಳೆಗಾಲಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ.
ನಗರದ ಪ್ರದೇಶಗಳಲ್ಲಿ ಜಲಾವೃತಗೊಳ್ಳುವ ಪ್ರದೇಶಗಳ ನಿವಾಸಿಗಳಿಗೆ ರಕ್ಷಣೆ ಒದಗಿಸಬೇಕಿದೆ. ಭದ್ರಾವತಿಯಲ್ಲಿ ಹೆಚ್ಚಾಗಿ ಮಳೆ ಬಂದರೆ ಮೊದಲು ಸಮಸ್ಯೆಗೆ ಸಿಲುಕುವುದು ನದಿ ಪಾತ್ರದ ನಿವಾಸಿಗಳು. ಅದರಲ್ಲಿಯೂ ವಾರ್ಡ್ ನಂ 1ರಲ್ಲಿ ದಡಮಘಟ್ಟ ರಸ್ತೆ ಮಾರ್ಗವಾಗಿ ಹೋಗುವಾಗ ಸಿಗುವ ಕವಲಗುಂದಿ ಚಾನಲ್ ಮಳೆಗಾಲದಲ್ಲಿ ಸಂಪೂರ್ಣವಾಗಿ ಮುಳಗಡೆಯಾಗುತ್ತದೆ. ಒಂದು ರೀತಿಯಲ್ಲಿ ಮುಳುಗಡೆ ಪ್ರದೇಶವೆಂದು ಹೇಳಬಹುದು. ಈ ಸಂಬಂಧ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗದೆ, ಮಳೆಗಾಲ ಬಂದಾಗ ಪರ್ಯಾಯ ವ್ಯವಸ್ಥೆಯೂ ಸಿಗದೆ ಅತಂತ್ರ ಸ್ಥಿತಿ ಎದುರಾಗುತ್ತದೆ.
ರಸ್ತೆ ಮೇಲೆ ನೀರು: ನಂತರ ಬಿ.ಎಚ್. ರಸ್ತೆ, ಹುತ್ತಾ ಕಾಲೋನಿ, ಜಿಂಕ್‌ಲೈನ್‌ನಲ್ಲಿ ರಸ್ತೆ, ಒಳಚರಂಡಿ ಸರಿ ಇಲ್ಲದೇ ರಸ್ತೆಯ ತುಂಬೆಲ್ಲ ನೀರು ನಿಂತುಕೊಳ್ಳುತ್ತದೆ. ನಗರದ ಐಷಾರಾಮಿ ನಗರ ಎಂದೇ ಹೇಳಬಹುದಾದ ಸಿದ್ದರೂಢನಗರದಲ್ಲಿ ಸರಿಯಾದ ರಸ್ತೆಗಳೇ ಇಲ್ಲದೇ ಮಣ್ಣು ರಸ್ತೆಗಳೇ ಇವೆ. ಇಲ್ಲಿಯೂ ಮಳೆಗಾಲದಲ್ಲಿ ಓಡಾಡುವುದು ಬಹಳ ಕಷ್ಟ.
ಬಸವೇಶ್ವರ ವೃತ್ತ ಮತ್ತು ಸಂತೆ ಮೈದಾನ ರಸ್ತೆಗಳಲ್ಲಿನ ಚರಂಡಿಗಳು ಅವ್ಯವಸ್ಥೆಯಿಂದ ಕೂಡಿರುವುದರಿಂದ ಮಳೆ ಬಂದರೆ ಚರಂಡಿ ಯಾವುದೋ ರಸ್ತೆ ಯಾವುದೋ ಎಂದು ಕಂಡು ಹಿಡಿಯುವುದೇ ಕಷ್ಟ ಸಾಧ್ಯ.
ಸೇತುವೆ ಮೇಲೆ ನೀರು: ಒಂದು ವೇಳೆ ರೈತನ ಆಶಯದಂತೆ ಈ ಬಾರಿ ಭರ್ಜರಿ ಮಳೆಯಾದರೆ ಭದ್ರಾವತಿಯ ಹೊಸಸೇತುವೆ ಮೇಲೆ ನೀರು ಹರಿಯುವುದು ಗ್ಯಾರೆಂಟಿ. ಈ ವೇಳೆ ಮೀನು ಮಾರುಕಟ್ಟೆ ಸೇರಿದಂತೆ ನದಿ ಪಾತ್ರದಲ್ಲಿರುವ ಪ್ರದೇಶಗಳೆಲ್ಲ ಜಲಾವೃತ ಆಗುವುದು ಖಚಿತ. ಇನ್ನು ರೈಲ್ವೆ ನಿಲ್ದಾಣದ ರಸ್ತೆ ನೀರು ಹದಗೆಟ್ಟಿದ್ದು, ಇಲ್ಲಿನ ತರಕಾರಿ ಮಾರುಕಟ್ಟೆಯ ಸ್ಥಿತಿ ಹೇಳುವುದೇ ಬೇಡ. ಅಷ್ಟು ಶೋಚನೀಯವಾಗುತ್ತದೆ.
ಇದೇ ಮಾರ್ಗವಾಗಿ ತರೀಕೆರೆ ರಸ್ತೆಗೆ ಕಾಲಿಟ್ಟರೆ ಎದುರಾಗುವುದು ರೈಲ್ವೆ ಮೇಲ್ಸೇತುವೆ. ಸದ್ಯ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಪಕ್ಕದ ಮಡ್ ರಸ್ತೆಯಲ್ಲಿ ಚಲಿಸಲು ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆ ಸ್ವಲ್ಪ ಕೆಳ ಭಾಗದಲ್ಲಿರುವುದರಿಂದ ಮಳೆ ಬಂದರೆ ಮುಖ್ಯ ರಸ್ತೆಯಲ್ಲಿ ಹರಿಯುವ ನೀರೆಲ್ಲ ಈ ರಸ್ತೆಗೆ ಬಂಜು ಜಮಾಯಿಸುತ್ತದೆ. ಈ ವೇಳೆ ಚಲಿಸುವುದು ವಾಹನ ಸವಾರರಿಗೆ ಸವಾಲಿನ ಕೆಲಸವೇ ಸರಿ.
ಇನ್ನು ಗ್ರಾಮಾಂತರ ಪ್ರದೇಶಗಳಾದ ಸಿದ್ದಾಪುರ, ಹೊಸಸಿದ್ದಾಪುರ, ಕಲ್ಲಹಳ್ಳಿ, ಸಂಕ್ಲಿಪುರ, ಡಿ.ಜಿ. ಹಳ್ಳಿ ಮತ್ತಿತರ ಕಡೆಗಳಲ್ಲಿನ ರಸ್ತೆಗಳು ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಬಂದರೆ ರಸ್ತೆಯ ಎರಡು ಬದಿಯಲ್ಲಿ ನೀರು ನಿಂತು ಓಡಾಡುವುದೇ ದುಸ್ತರವಾಗುವ ಸಾಧ್ಯತೆ ಇದೆ.