ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಣ ಹಂಚಿಕೆ ವಿಚಾರ ಕೊಲೆಯಲ್ಲಿ ಅಂತ್ಯ

Lingaraj Badiger
Updated On : 31 May 2013, 11:12 am

ಕಪ್ರ ವಾರ್ತೆ, ಶಿವಮೊಗ್ಗ, ಮೇ 30
ಹಣ ಹಂಚಿಕೆ ವಿಚಾರದಲ್ಲಿ ಉಂಟಾದ ವಿವಾದ ಸ್ನೇಹಿತನೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪದ ಇಂದಿರಾನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
 ರಾಘವೇಂದ್ರ (27) ಕೊಲೆಗೀಡಾದ ಯುವಕ. ಆತನ ಸ್ನೇಹಿತನಾದ ದುರ್ಗು (32) ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ. ಈತ ತನ್ನ ಇತರೆ ನಾಲ್ವರು ಸಹಚರರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರಾಘವೇಂದ್ರನ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾ ನಗರ ಠಾಣೆ ಪೊಲೀಸರು ಮುಖ್ಯ ಆರೋಪಿ ದುರ್ಗಾ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.
 ರಾಘವೇಂದ್ರ ಹಾಗೂ ದುರ್ಗಾ ಇಬ್ಬರು ಸ್ನೇಹಿತರಾಗಿದ್ದು ಇಂದಿರಾನಗರದ ವಾಸಿಗಳು. ಹಲವು ವರ್ಷಗಳಿಂದ ಇವರಿಬ್ಬರು ಜೊತೆಗೂಡಿ ಬೈಕ್, ಮಾಂಗಲ್ಯ ಸರ ಅಪಹರಣ ಮತ್ತಿತರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರಿಬ್ಬರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಪೊಲೀಸರಿಂದ ಬಂಧಿತರಾಗಿ ಜೈಲು ಸೇರಿದ್ದರು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.
 ಇತ್ತೀಚೆಗೆ ಕಳವು ದಂಧೆಯ ಜೊತೆಗೆ ಸಣ್ಣಪುಟ್ಟ ಸ್ಟೇಶನರಿ ವಸ್ತುಗಳ ವ್ಯಾಪಾರ ನಡೆಸುತ್ತಿದ್ದರು. ಈ ವ್ಯಾಪಾರದಲ್ಲಿ ಗಳಿಸಿದ ಹಣ ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ವಿವಾದ ಉಂಟಾಗಿ ವೈಮನಸ್ಸಿಗೆ ಕಾರಣವಾಗಿತ್ತು.
ಬುಧವಾರ ರಾತ್ರಿ ರಾಘವೇಂದ್ರನನ್ನು ಗ್ರಾಮದ ನಿರ್ಜನ ಪ್ರದೇಶವೊಂದಕ್ಕೆ ದುರ್ಗಾ ಕರೆಯಿಸಿಕೊಂಡಿದ್ದಾನೆ. ನಂತರ ದುರ್ಗಾ ಮತ್ತು ನಾಲ್ವರು ಸೇರಿ ಮಾರಕಾಸ್ತ್ರದಿಂದ ರಾಘವೇಂದ್ರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
 ರಾಘವೇಂದ್ರನ ಚೀರಾಟ ಗಮನಿಸಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ವಾಹನವೊಂದರಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟನೆಂದು ಪೊಲೀಸರು ಮೂಲಗಳು ತಿಳಿಸಿವೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿಯಾದ ಮದ್ಯಪಾನ: ಸಾವು
ಭದ್ರಾವತಿ: ತಾಲೂಕು ಕೂಡ್ಲಿಗೆರೆ ಗ್ರಾಮ ಆಟಗೆರಿ ಕ್ಯಾಂಪಿನ ಮಜೆ ಎಂಬವರು ಅತಿಯಾದ ಮದ್ಯಪಾನ ಸೇವನೆಯಿಂದ ಅಸ್ವಸ್ತರಾಗಿದ್ದ ಅವರನ್ನು ಮಂಗಳವಾರ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಬುಧವಾರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ನಿಧನರಾಗಿರುತ್ತಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ವ್ಯಕ್ತಿ ಮೇಲೆ ನರಿ ದಾಳಿ: ಗಾಯ
ಸೊರಬ: ನರಿ ಹಾವಳಿಗೆ ತುತ್ತಾಗಿ ವ್ಯಕ್ತಿಯೋರ್ವರು ತೀವ್ರ ಗಾಯಗೊಂಡ ಘಟನೆ ಸೊರಬ ಸಮೀಪದ ಮರೂರು ಗ್ರಾಮದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಮರೂರು ಗ್ರಾಮದ ಜಯಪ್ಪ (58) ಅವರು ದನ ಮೇಯಿಸಲೆಂದು ಹಿರೇಶಕುನ ಗೋಮಾಳದ ಬಳಿ ಹೋದಾಗ ನರಿಯೊಂದು ಹಠಾತ್ ದಾಳಿ ನಡೆಸಿದೆ.
ಜಯಪ್ಪನ ಮೂಗು, ಕೈ ಬೆರಳು ಮೊದಲಾದ ಕಡೆ ತೀವ್ರ ಗಾಯಗಳಾಗಿದ್ದು, ಹತ್ತಾರು ಜನ ಸೇರಿದ ಬಳಿಕ ನರಿ ಓಡಿಹೋಗಿದೆ. ತೀವ್ರ ಗಾಯಗೊಂಡ ಜಯಪ್ಪ ಅವರನ್ನು ಕೂಡಲೇ ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ.
ನರಿಗೆ ಹುಚ್ಚು ಹಿಡಿದಿದ್ದರಿಂದ ಈ ರೀತಿ ದಾಳಿ ನಡೆಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು ತುಸು ಆತಂಕಕ್ಕೊಳಗಾಗಿದ್ದಾರೆ.
ವ್ಯಕ್ತಿ ಕಾಣೆ
ಭದ್ರಾವತಿ: ಭದ್ರಾ ಕಾಲೋನಿ ವಾಸಿ ಬಿ.ಜಿ. ನಾಗಭೂಷಣಸ್ವಾಮಿ ಕಾಣೆಯಾಗಿರುವುದಾಗಿ ಹೊಸಮನೆ ಶಿವಾಜಿ ವೃತ್ತ ಪೋಲಿಸ್ ಠಾಣೆ ತಿಳಿಸಿದೆ. ಇವರಿಗೆ 48 ವರ್ಷ ವಯಸ್ಸಾಗಿದ್ದು 5 ಅಡಿ 5 ಇಂಚು ಎತ್ತರವಿದ್ದಾರೆ. ಉದ್ದಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿರುವ ಇವರು ಮನೆಯಿಂದ ಹೋಗುವಾಗ ಕಪ್ಪು-ಕೆಂಪು ಚೆಕ್ಸ್ ಬಣ್ಣದ ಶರ್ಟ್ ಮತ್ತು ಸಿಮೆಂಟ್ ಬಣ್ಣದ ಪ್ಯಾಂಟ್ ಹಾಗೂ ಬೂದು ಬಣ್ಣದ ಜರ್ಕಿನ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ಭದ್ರಾವತಿಯ ಹೊಸಮನೆ ಶಿವಾಜಿ ವೃತ್ತದ ಠಾಣೆಗೆ ತಿಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯುವತಿ ನಾಪತ್ತೆ
ಭದ್ರಾವತಿ: ಮಂಜುನಾಥ ರೈಸ್ ಮಿಲ್ ಹಿಂಭಾಗದ ಎನ್‌ಎಂಸಿ 1ನೇ ತಿರುವು ಎಡಭಾಗದ ವಾಸಿ ಋತಿಜಾಬಿ (19) ನಾಪತ್ತೆಯಾಗಿದ್ದಾರೆ.
ಐದು ಅಡಿ ಎತ್ತರವಿರುವ ಈಕೆ ದುಂಡು ಮುಖ ಎಣ್ಣೆಗೆಂಪು ಬಣ್ಣ ಹಾಗೂ ಸಾಧಾರಣ ಮೈಕಟ್ಟನ್ನು ಹೊಂದಿದ್ದು, ಹಳದಿ ಬಣ್ಣದ ಜೂಡಿದಾರ್ ಧರಿಸಿರುತ್ತಾಳೆ. ಕನ್ನಡ, ಉರ್ದು, ತೆಲುಗು, ತಮಿಳು ಮಾತನಾಡಬಲ್ಲ ಈಕೆಗೆ ಎಡ ಕುತ್ತಿಗೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಈಕೆಯ ಬಗ್ಗೆ ಸುಳಿವು ಸಿಕ್ಕವರು ಭದ್ರಾವತಿ ಹೊಸಮನೆ ಶಿವಾಜಿ ವೃತ್ತ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಪ್ರಕಟಣೆ ತಿಳಿಸಿದೆ.
ಅಶ್ರಫ್ ಪಾಶ
ಭದ್ರಾವತಿ: ಬಿಎಸ್‌ಪಿ ಶಿವಮೊಗ್ಗ ಜಿಲ್ಲಾ ಮಾಜಿ ಅಧ್ಯಕ್ಷ ಅಶ್ರಫ್ ಪಾಶ ಅನಾರೋಗ್ಯದಿಂದ ಗೋವಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ.
ಮೃತರಿಗೆ 57 ವರ್ಷ ವಯಸ್ಸಾಗಿತ್ತು. ಇವರು ಶಿವಮೊಗ್ಗ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷರಾಗಿ ಹಾಗೂ ನ್ಯೂಟೌನ್ ಕ್ರಿಕೆಟ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement