ಅಡಕೆ ನಿಷೇಧ: ಇಂದು ಪ್ರತಿಭಟನೆ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಏಕಿ ರಾಜ್ಯಾದ್ಯಂತ ಗುಟ್ಕಾ ಮಾರಾಟ ನಿಷೇಧ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಅಡಕೆ ಬೆಳೆಗಾರರ ಒಕ್ಕೂಟ ಜೂನ್ 1ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಳಿಗ್ಗೆ 11ಗಂಟೆಗೆ ನಗರದ ಸೈನ್ಸ್ ಮೈದಾನದಿಂದ ಹೊರಡುವ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿ ಧರಣಿ ನಡೆಸಲಿದೆ. ಆದರಿಂದ ಅಡಕೆ ಬೆಳೆಗಾರರು, ಕೃಷಿ ಕಾರ್ಮಿಕರು, ರೈತರು, ಅಡಕೆ ಮಂಡಿ ವರ್ತಕರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕೂಟದ ಗೌರವ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮತ್ತು ಅಧ್ಯಕ್ಷ ಕೂಡ್ಲಿಗೆರೆ ರಾಜಣ್ಣ ತಿಳಿಸಿದ್ದಾರೆ.
ನಿಷೇದಕ್ಕೆ ಸ್ವಾಗತ
ಸೊರಬ: ರಾಜ್ಯದಲ್ಲಿ ಗುಟ್ಕಾ ನಿಷೇದ ಜಾರಿಯಾಗಿರುವುದು ಸ್ವಾಗತಾರ್ಹ ಸಂಗತಿ ಎಂದು ತಾಲೂಕು ಬಿಎಸ್ಪಿ ಮುಖಂಡ ಗುಡವಿ ಎ.ಬಸವಣ್ಯಪ್ಪ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಧಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸರಿಯಿದೆ, ಆದರೆ ತಕ್ಷಣ ಕಾನೂನು ಜಾರಿಯಾದರೆ ಅಡಕೆ ಬೆಳೆಗಾರ ಸಂಕಷ್ಟದಲ್ಲಿ ಸಿಲುಕಿದಂತಾಗುತ್ತದೆ. ಹಾಗಾಗಿ ಬೆಳೆಗಾರರಿಗೆ ಪರ್ಯಾಯ ಮಾರ್ಗ ಸೂಚಿಸಿ, ಜಾರಿಗೊಳಿಸುವ ಚಿಂತನೆ ನಡೆಸಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಯುವಜನತೆ ಮಾದಕ ಸೇವನೆಯಿಂದ ಹೊರಬರಲು, ಕ್ಯಾನ್ಸರ್ ಮುಂತಾದ ಭಯಾನಕ ಕಾಯಿಲೆಯಿಂದ ಮುಕ್ತರಾಗಲು, ಕುಗ್ಗುವ ಯುವಶಕ್ತಿಯನ್ನು ಹೆಚ್ಚಿಸಲು ಈ ನಿಷೇದ ಕಾಯಿದೆ ನೆರವಾದಂತಾಗಿದೆ. ಭಾರತದಲ್ಲಿ ಈಗಾಗಲೆ 20 ರಾಜ್ಯಗಳು ಗುಟ್ಕಾ ನಿಷೇಧಿಸಿದ್ದು, ಅದರಲ್ಲಿ ಕರ್ನಾಟಕ 21ನೇ ರಾಜ್ಯವಾಗಲಿದೆ ಎಂದು ತಿಳಿಸಿದ್ದಾರೆ.
--