ಅಡಕೆ ನಿಷೇಧ: ಮಾರುಕಟ್ಟೆಯಲ್ಲಿ ಕಂಪನ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 31
ರಾಜ್ಯ ಸರ್ಕಾರದ ಗುಟ್ಕಾ ನಿಷೇಧ ಸುದ್ದಿ ರಾಜ್ಯದ ಅತಿದೊಡ್ಡ ಅಡಕೆ ಮಾರುಕಟ್ಟೆಯಾದ ಶಿವಮೊಗ್ಗ ಎಪಿಎಂಸಿಯಲ್ಲಿ ಕಂಪನ ಉಂಟು ಮಾಡಿದೆ.
ಪ್ರಮುಖ ಅಡಕೆ ವರ್ತಕರು ಶುಕ್ರವಾರ ವಹಿವಾಟಿನಿಂದ ಹಿಂದೆ ಸರಿದರೆ, ಬೆಳೆಗಾರರಿಗೆ ಕೈ ಸಾಲಕೊಟ್ಟ ದಲ್ಲಾಳಿ, ಮಂಡಿಗಳವರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬೆಳೆಗಾರರು ನಿರಂತರವಾಗಿ ಮಂಡಿ, ಸಹಕಾರ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿ ಬೆಲೆ ಏನಾಯಿತು ಎಂದು ವಿಚಾರಿಸುತ್ತಲೇ ಇದ್ದರು. ಈ ಮಧ್ಯೆ ಶುಕ್ರವಾರ ಅಡಕೆ ಬೆಲೆಯಲ್ಲಿ ಕ್ವಿಂಟಾಲ್ಗೆ ಸರಾಸರಿ ಒಂದರಿಂದ ಒಂದೂವರೆ ಸಾವಿರ ರುಪಾಯಿಯಷ್ಟು ಇಳಿಕೆ ಕಂಡಿತು.
ಗೊಂದಲದ ಗೂಡು: ಗುಟ್ಕಾ ನಿಷೇಧವಾದರೂ ಅಡಕೆ ಬೆಳೆಗಾರರಿಗೆ ಏನೂ ತೊಂದರೆ ಇಲ್ಲ ಎಂಬ ಸರ್ಕಾರದ ವಾದವನ್ನು ಒಪ್ಪಲು ಅಡಕೆ ವರ್ತಕರು, ಬೆಳೆಗಾರರು ಸುತಾರಾಂ ತಯಾರಿಲ್ಲ. ಇದಕ್ಕೆ ಅವರು ಕಾರಣಗಳನ್ನೂ ಕೊಡುತ್ತಾರೆ.
ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಗುಟ್ಕಾ ತಯಾರಿಕಾ ಪ್ರಮುಖ ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಆದರೂ ಸಹ ಮತ್ತೆ ಅಡಕೆ ಬೆಲೆಯಲ್ಲೇನು ವ್ಯತ್ಯಾಸವಾಗಲಿಲ್ಲ. ಒಂದಷ್ಟು ದಿನ ಪರಿಸ್ಥಿತಿ ಗಂಭೀರವಾದರೂ ಮತ್ತೆ ಬೆಲೆ ಚೇತರಿಕೆ ಕಂಡಿತು. ಇದಕ್ಕೆ ಕಾರಣ, ಅಲ್ಲಿನ ಅನೇಕ ಕಂಪನಿಗಳು ಗೋವಾ, ಬೆಳಗಾವಿ, ಧಾರವಾಡ ವ್ಯಾಪ್ತಿಯಲ್ಲಿ ತಮ್ಮ ಘಟಕಗಳನ್ನು ತೆರೆದು ಗುಟ್ಕಾ ತಯಾರಿಕೆಯಲ್ಲಿ ನಿರತವಾಗಿದ್ದವು. ಇನ್ನು ಮುಂದೆ ಕರ್ನಾಟಕದಲ್ಲಿ ಗುಟ್ಕಾ ನಿಷೇಧವಾದರೆ ಸಹಜವಾಗಿ ಇಲ್ಲಿಂದ ಅಡಕೆ ರವಾನೆಯಾಗುವುದು ಇಳಿಕೆಯಾಗುತ್ತದೆ.
ಬೆಲೆ ಇಳಿಕೆ ಸಹಜ: ಮಾರುಕಟ್ಟೆಗೆ ಬರುವ ಒಟ್ಟಾರೆ ಅಡಕೆ ಪ್ರಮಾಣದಲ್ಲಿ ಶೇ.70ಕ್ಕಿಂತ ಹೆಚ್ಚು ಗುಟ್ಕಾ ಹಾಗೂ ಪಾನ್ ಮಸಾಲಾ ತಯಾರಿಕೆಗೆಂದು ಖರೀದಿಯಾಗುತ್ತಿತ್ತು. ಹೀಗಾಗಿ ಬೆಲೆ ಇಳಿಕೆಯಾಗುತ್ತದೆಂಬ ವಾದ ಮಾರುಕಟ್ಟೆಯಲ್ಲಿದೆ.
ಈ ಮಧ್ಯೆ ಕರ್ನಾಟಕದಲ್ಲಿ ಗುಟ್ಕಾ ಜೊತೆಗೆ ಪಾನ್ ಮಸಾಲ ಸಹ ನಿಷೇಧವಾಗುತ್ತದೆಂಬ ಸುದ್ದಿ ಅಡಕೆ ಬೆಳೆಗಾರರನ್ನು ದಿಗ್ಭ್ರಮೆ ಮೂಡಿಸಿದೆ. ರಾಜ್ಯದ ಅಡಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಪಾನ್ ಮಸಾಲಕ್ಕೆ ಬಳಕೆಯಾಗುತ್ತಿತ್ತು. ಪಾನ್ ಮಸಾಲ ಕೂಡ ನಿಷೇಧವಾದರೆ ಅಡಕೆ ಬೆಳೆಗಾರರು ಮತ್ತು ಮಾರಾಟಗಾರರಿಗೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಡಕೆ ಬೆಳೆಗಾರ ಹಾಗೂ ಸಹಕಾರಿ ಧುರೀಣ ಮಂಜುನಾಥಗೌಡ ಅಭಿಪ್ರಾಯಪಡುತ್ತಾರೆ.
ಮಂಡಿಗಳಲ್ಲಿ ದಿಗಿಲು: ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ನೂರಾರು ಅಡಕೆ ದಲ್ಲಾಲರಿದ್ದಾರೆ, ಕಮಿಷನ್ ಏಜೆಂಟರಿದ್ದಾರೆ. ಇಲ್ಲಿನ ಮಂಡಿಗಳವರು ಅಡಕೆ ಬೆಳೆಗಾರರಿಗೆ ಕೈ ಸಾಲ ಕೊಡುವ ಸಂಪ್ರದಾಯ ಮುಂಚಿನಿಂದಲೂ ಬಂದ ಪದ್ಧತಿ. ಬೆಳೆಗಾರನೊಬ್ಬ ಪ್ರತಿ ವರ್ಷ ತಮ್ಮ ಮಂಡಿಗೆ ಹಾಕುವ ಅಡಕೆ ಪ್ರಮಾಣ ಗಮನಿಸಿ ಬೆಳೆಗಾರನಿಗೆ ಮಂಡಿ ಮಾಲೀಕರು ಕೈ ಸಾಲ ಕೊಡುತ್ತಾರೆ.
ಅಡಕೆ ಬೆಳೆಗಾರನ ತುರ್ತು ಹಣಕಾಸು ಸಹಾಯಕ್ಕೆ ನೆರವಾಗುತ್ತಿದ್ದವರು ಇದೇ ಮಂಡಿಯವರು. ಆದ್ದರಿಂದ ಈ ಮಂಡಿ ಮಾಲೀಕರು ಕಂಗಾಲಾಗಿದ್ದಾರೆ. ಅಡಕೆ ಬೆಲೆ ಕುಸಿದರೆ ಸಾಲ ವಸೂಲಾತಿ ಹೇಗೆಂಬ ಆತಂಕದಲ್ಲಿದ್ದಾರೆ. ಸಾಲ ಯಾವುದೇ ಆಧಾರ ಇಟ್ಟುಕೊಳ್ಳದೇ ನೀಡಿದ್ದು. ಶಿವಮೊಗ್ಗ ಒಟ್ಟು ಮಾರುಕಟ್ಟೆಯಲ್ಲಿ ಈ ಸಾಲದ ಪ್ರಮಾಣ ನೂರು ಕೋಟಿಗೂ ಮೀರುತ್ತದೆ ಎಂದು ಪ್ರಮುಖ ಮಂಡಿ ವರ್ತಕರು “OÚ«ÚsÚ®ÚúڒOæQ ತಿಳಿಸಿದರು.
ಈ ಮಧ್ಯೆ ಅಡಕೆ ಮಂಡಿಗಳಲ್ಲಿ ಕೆಲಸ ಮಾಡುವವರಲ್ಲೂ ಶುಕ್ರವಾರ ಆತಂಕ ಮಡುಗಟ್ಟಿದ್ದು. ಅಡಕೆ ಬೆಲೆ ಕುಸಿದರೆ ಎಲ್ಲಿ ತಮ್ಮ ತುತ್ತಿನ ಚೀಲಕ್ಕೆ ಧಕ್ಕೆ ಬಂದೀತೋ ಎಂಬ ಚರ್ಚೆಯಲ್ಲೇ ಮುಳುಗಿದ್ದರು.
- ಶ್ರೀಕಾಂತ ಭಟ್