ಮೆಂಗಸಂದ್ರ ಶಾಲೆ ಸರ್ಕಾರಿ ಶಾಲೆಗಳಿಗೆ ಮಾದರಿ
ಕ.ಪ್ರ.ವಾರ್ತೆ, ಶ್ರೀರಾಂಪುರ, ಮೇ 31
ಸಾಧನೆ ಮಾಡಲು ಯಾವುದೂ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಹೋಬಳಿಯ ಮೆಂಗಸಂದ್ರ ಸರ್ಕಾರಿ ಪ್ರೌಢಶಾಲೆ ಉದಾಹರಣೆಯಾಗಿದೆ. ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ 2007ರಲ್ಲಿ ಪ್ರಾರಂಭವಾದ ಶಾಲೆ ನಾಲ್ಕು ವರ್ಷದಲ್ಲಿ ಮೂರು ಬಾರಿ ಶೇ.100 ಫಲಿತಾಂಶ ಪಡೆದಿದೆ.
2009-10 ಮತ್ತು 2011-2012ನೇ ಹಾಗೂ 2012-2013ನೇ ಸಾಲಿನಲ್ಲಿ ಶೇ.100ರ ಫಲಿತಾಂಶ ಪಡೆದಿದೆ. ಕುಗ್ರಾಮವಾಗಿರುವ ಮೆಂಗಸಂದ್ರ ಗ್ರಾಮದಲ್ಲಿ ಅರ್ಥಿಕವಾಗಿ ಹಿಂದುಳಿದ, ರೈತ ಹಾಗೂ ಕೂಲಿ ಕೆಲಸ ಮಾಡುವ ಕುಟುಂಬಗಳ ಮಕ್ಕಳೇ ಇದ್ದಾರೆ. ಆದರೆ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಸಮನ್ವಯತೆ ಗ್ರಾಮಸ್ಥರ ಸಹಕಾರ ಹಾಗೂ ಪೋಷಕರು ಶಾಲೆಯೊಂದಿಗೆ ಇರುವ ಬಾಂಧವ್ಯದಿಂದ ಇದು ಸಾಧ್ಯ ಎನ್ನುತ್ತಾರೆ ರಾಜ್ಯ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಎಲ್. ಜಯಪ್ಪ.
ಎಲ್ಲ ಸೌಲಭ್ಯವಿರುವ ಪಟ್ಟಣದ ಶಾಲೆಗಳಿಗಿಂತ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಕಳೆದ ವರ್ಷ 25 ವಿದ್ಯಾರ್ಥಿಗಳಲ್ಲಿ 1 ಅತ್ಯುನ್ನುತ ಶ್ರೇಣಿ, 12 ಪ್ರಥಮ, 8 ದ್ವಿತೀಯ, 4 ಸಾಮನ್ಯ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಗೆ ಶೇ.100 ಫಲಿತಾಂಶ ಗಳಿಸಿದ್ದು, ಪ್ರತಿ ವಿದ್ಯಾರ್ಥಿಯ ಸರಾಸರಿ ಫಲಿತಾಂಶ ಶೇ.61.26 ಬಂದಿದೆ ಎಂದು ಮಾಹಿತಿ ನೀಡುತ್ತಾರೆ.
ಉತ್ತಮ ಸಾಧನೆಗೈದವರು: ಪವನ್ಕುಮಾರ್ ನಾಯಕ್ 534 ಅಂಕಪಡೆದು ಅತ್ಯುನ್ನತ ಶ್ರೇಣೀಯಲ್ಲಿ ಉತ್ತೀರ್ಣನಾಗಿದ್ದು, ದರ್ಶನ್ 529. ರವಿ ಎಂಬ ವಿದ್ಯಾರ್ಥಿ ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿರುವ ಜತೆಗೆ 518 ಅಂಕಗಳನ್ನು ಪಡೆದಿದ್ದಾನೆ. ಸಿಂಚನ 516 ಹಾಗೂ ಗೋವರ್ಧನ್ 509 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕರ ಇಚ್ಚಾಶಕ್ತಿ, ಇಲಾಖೆ ನಿರ್ದೇಶನದಂತೆ ಕ್ರಿಯಾ ಯೋಜನೆಗಳ ಬೋಧನೆ, ಕಿರು, ಅರ್ಧವಾರ್ಷಿಕ ಪರೀಕ್ಷೆಗಳ ನಡೆಸುವುದು ಹಾಗೂ ಪರೀಕ್ಷೆಯಲ್ಲಿ ಮಕ್ಕಳ ಪ್ರಗತಿಯ ಮೇಲೆ ವಿಶೇಷ ತರಗತಿಗಳು, ಗುಂಪು ಅಧ್ಯಯನ, ರಸಪ್ರಶ್ನೆ, ಹಾಗೂ ಪಠ್ಯೆತರ ಚಟುವಟಿಕೆಗಳನ್ನು ನಡೆಸುವ ಮೂಲಕ, ಅಧ್ಯಯನದಲ್ಲಿ ಹಿಂದುಳಿದ ಮಕ್ಕಳ ಪೋಷಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ.
ಶಾಲೆಗೆ ಮೆಚ್ಚುಗೆ: ರಾಜ್ಯ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಸಹ ನಿರ್ದೆಶಕ ಬಿ.ಎ. ರಾಜಶೇಖರ್ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ನಡೆಯುವ ಶೈಕ್ಷಣಿಕ ಚಟವಟಿಕೆಗಳ ಅನುಷ್ಠಾನ ಹಾಗೂ ಶಾಲೆಯ ಪರಿಸರ ಶಿಕ್ಷಕರು ಹಾಗೂ ಗ್ರಾಮಸ್ಥರ ಸಮನ್ವಯತೆಯಲ್ಲಿ ಶಾಲೆಯ ಅಭಿವೃದ್ಧಿ ನೋಡಿ ರಾಜ್ಯದ ಎಲ್ಲ ಶಾಲೆಗಳು ಪ್ರಗತಿಯತ್ತ ಸಾಗಲು ಈ ಶಾಲೆ ಮಾರ್ಗದರ್ಶನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಸಜ್ಜಿತವಾದ ಕಟ್ಟಡ ಹಾಗೂ ವಿಶಾಲವಾದ ಮೈದಾನವಿರುವ ಶಾಲೆಯಲ್ಲಿ ಗಿಡ ಮರ ಬೆಳಸಲು ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ 6 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, ನೀರಿನ ವ್ಯವಸ್ಥೆ ಮಾಡಲಾಗಿದೆ. ಶಾಲೆಗೆ ಹೆಚ್ಚುವರಿ ಶೌಚಾಲಯ, ಗ್ರಂಥಾಲಯ, ಪ್ರಯೋಗಶಾಲೆ, ಗಣಕ ಯಂತ್ರ, ಕೊಠಡಿಗಳ ನಿರ್ಮಾಣವಾಗಬೇಕಿದೆ. ಶಾಲೆಗೆ ದಾನವಾಗಿ ನೀಡಿರುವ ಜಮೀನು ಶಾಲೆ ಹೆಸರಿಗೆ ನೋಂದಣಿಯಾಗುವ ಕೆಲಸವಾಗಬೇಕು ಎಂದು ಮುಖ್ಯ ಶಿಕ್ಷಕ ಎಲ್. ಜಯಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.