ಸಿಗರೇಟ್ ಲಾಬಿಗೆ ಮಣಿದು ಗುಟ್ಕಾ ನಿಷೇಧ
ಕ.ಪ್ರ.ವಾರ್ತೆ, ಸಾಗರ, ಮೇ 31
ರಾಜ್ಯ ಸರ್ಕಾರ ಸಿಗರೇಟ್ ಲಾಬಿಗೆ ಮಣಿದು ಗುಟ್ಕಾ ನಿಷೇಧ ಮಾಡಲು ಹೊರಟಿದೆ ಎಂದು ಇಲ್ಲಿನ ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಡಕೆ ಬೆಳೆಗಾರರು, ತಜ್ಞರು, ಸ್ಥಳೀಯವಾಗಿ ಅಡಕೆ ಕುರಿತು ಹೋರಾಟ ಮಾಡುತ್ತಿರುವ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಗುಟ್ಕಾ ನಿಷೇಧಕ್ಕೆ ಹೊರಟಿರುವುದು ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ದೂರಿದರು.
ಖಂಡನೆ: ರಾಜ್ಯದ ಶೇ.50ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಅಡಕೆ ಬೆಳೆ ಹಾಗೂ ಅದಕ್ಕೆ ಪೂರಕ ಉದ್ಯಮವನ್ನು ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ. ಗುಟ್ಕಾ ನಿಷೇಧದಿಂದ ಇವರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ. ಕಾಂಗ್ರೆಸ್ ಸರ್ಕಾರ ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿರುವುದು ಖಂಡನೀಯ ಎಂದರು.
ಮೊದಲು ಸಿಗರೇಟ್ ನಿಷೇಧಿಸಲಿ: ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಸ್ಥಿರವಾಗಿತ್ತು. ಈಗ ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಬೆಲೆ ಕುಸಿಯುವ ಭೀತಿ ಎದುರಾಗಿದೆ. ಹಿಂದಿನಿಂದಲೂ ಅಡಕೆಗೆ ಸ್ಥಿರಬೆಲೆ ಬಂದಾಗಲೆಲ್ಲಾ ಬೆಳೆಗಾರರು ಒಂದಿಲ್ಲೊಂದು ಆತಂಕ ಎದುರಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ತಂಬಾಕುರಹಿತ ರಾಜ್ಯ ಸ್ಥಾಪನೆಯ ಉದ್ದೇಶವಿದ್ದರೆ ಮೊದಲು ಸಿಗರೇಟ್ ನಿಷೇಧಿಸಬೇಕು. ಅಡಕೆಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಬೆಳೆಗೆ ಸ್ಥಿರತೆ ತಂದುಕೊಟ್ಟ ಮೇಲೆ ಬೇಕಾದರೆ ಗುಟ್ಕಾ ನಿಷೇಧಕ್ಕೆ ಮುಂದಾಗಲಿ ಎಂದು ಹೇಳಿದರು.
ಸರ್ಕಾರದ ಈ ನಿರ್ಧಾರಕ್ಕೆ ತಾತ್ವಿಕ ಅಂತ್ಯ ಕಂಡುಕೊಳ್ಳಲು ಎರಡು ರೀತಿಯ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೋ ಸಂಸ್ಥೆಗಳು ಅಡಕೆ ಹಾನಿಕಾರಕ ವಸ್ತುಗಳ ಪಟ್ಟಿಯಿಂದ ಹೊರಗಿಡುವಂತೆ ದಾವೆ ಹೂಡಿದ್ದು, ಅದರ ವಿಚಾರಣೆ ಜೂ.12ಕ್ಕೆ ನಡೆಯಲಿದೆ. ಇದರ ಜೊತೆಗೆ ಬೆಳೆಗಾರರು, ವರ್ತಕರು, ಕೂಲಿಕಾರ್ಮಿಕರು ಹಾಗೂ ಅಡಕೆ ಅವಲಂಬಿತ ಕುಟುಂಬದ ನೇತೃತ್ವದಲ್ಲಿ ಸಂಘಟಿತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಹಿಂದೆ ಅಡಕೆ ಬೆಳೆಗಾರರ ಸಮಸ್ಯೆ ಮುಂದಿಟ್ಟುಕೊಂಡು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎನ್. ಮಂಜುನಾಥಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈಗ ಗುಟ್ಕಾ ನಿಷೇಧ ಆದೇಶಕ್ಕೆ ಸಂಬಂಧಿಸಿದಂತೆ ಮಂಜುನಾಥಗೌಡರು ಎಲ್ಲರೊಂದಿಗೆ ಚರ್ಚಿಸಿ ಹೋರಾಟ ಹಮ್ಮಿಕೊಳ್ಳುವಂತೆ ಒತ್ತಾಯಿಸಿದರು.
ಕೆ.ಆರ್. ಗಣೇಶಪ್ರಸಾದ್, ರಾಧಾಕೃಷ್ಣ ಬೇಂಗ್ರೆ, ಡಿ. ತುಕಾರಾಂ, ಕೆ.ಆರ್. ವಾದಿರಾಜ್, ರವಿ ಮರಡುಮನೆ, ನಾಗರಾಜ್, ವಿ. ಮಹೇಶ್, ಪ್ರತಾಪ್ ಹಾಜರಿದ್ದರು.
ನಿಷೇಧ ಹಿಂಪಡೆಯಲು ಮನವಿ
ಸಾಗರ: ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವ ಕ್ರಮವನ್ನು ಖಂಡಿಸಿರುವ ತಾಲೂಕು ಬಿಜೆಪಿ ಘಟಕ ಪ್ರತಿಭಟನೆ ನಡೆಸಿ ಪ್ರಸ್ತಾಪ ಕೈಬಿಡುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಯು.ಎಚ್. ರಾಮಪ್ಪ ಮಾತನಾಡಿ, ಗುಟ್ಕಾ ನಿಷೇಧದಿಂದ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರಲಿವೆ. ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರೋಗಬಾಧೆ, ದರ ಕುಸಿತ, ಕೂಲಿಕಾರ್ಮಿಕರ ಸಮಸ್ಯೆ ನಡುವೆಯೂ ಸಾಲಸೋಲ ಮಾಡಿ ಅಡಕೆ ಬೆಳೆ ತೆಗೆಯುತ್ತಿದ್ದಾರೆ. ರಾಜ್ಯ ಸರ್ಕಾರ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಬದಲು ಗುಟ್ಕಾ ನಿಷೇಧಿಸುವ ಮೂಲಕ ಗಧಾಪ್ರಹಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಅವೈಜ್ಞಾನಿಕ ಕ್ರಮ: ಅಡಕೆ ಬೆಳೆ ಹಾಗೂ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆಯನ್ನೇ ಕಲ್ಪಿಸದೆ ಏಕಾಏಕಿ ಗುಟ್ಕಾ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವ ಸರ್ಕಾರದ ಕ್ರಮ ಅವೈಜ್ಞಾನಿಕವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ರಾಮಪ್ಪ, ಮಲೆನಾಡಿನ ಅಡಕೆ ಬೆಳೆಗಾರರು ಅಡಕೆಯಿಂದ ಬರುವ ಆದಾಯವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಈಗ ಗುಟ್ಕಾ ನಿಷೇಧದ ನಿರ್ಧಾರ ಬೆಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಕೂಡಲೆ ನಿಷೇಧದ ತೀರ್ಮಾನವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಒಡೆಯರ್, ನಗರಸಭೆ ಸದಸ್ಯರಾದ ಅರವಿಂದ್, ಶ್ರೀನಿವಾಸ್, ಸಂತೋಷ್ ಶೇಟ್, ನಾಗರತ್ನ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವ.ಶಂ. ರಾಮಚಂದ್ರ ಭಟ್, ಕಸ್ತೂರಿ ನಾಗರಾಜ್, ಯುವ ಘಟಕದ ಅಧ್ಯಕ್ಷ ಚೇತನರಾಜ್, ರಾಜು ಮಡಿವಾಳ, ಪ್ರಮುಖರಾದ ಸುನೀಲ್, ಸುದರ್ಶನ ಕೆ.ಎಚ್. ರವೀಶಕುಮಾರ್, ಚಂದ್ರಕಾಂತ ಜಿಂಗಾಡೆ, ಕೆ.ಎನ್. ಶ್ರೀಧರ್ ಹಾಜರಿದ್ದರು.