ಕಲಾಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನ. 5ರಂದು ಬೆಳಗ್ಗೆ 10 ಗಂಟೆಯಿಂದ ಶಿಕಾರಿಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಮಕ್ಕಳ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ ಸ್ಪರ್ಧೆ ಏರ್ಪಡಿಸಲಾಗಿದೆ. ಸೃಜನಾತ್ಮಕ, ಬರವಣಿಗೆ, ಪ್ರದರ್ಶನ ಕಲೆ ಮತ್ತು ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳು ನಡೆಯಲಿವೆ. ನಿಗದಿತ ನಮೂನೆಯ ಅರ್ಜಿಯನ್ನು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ, ಶಿಕಾರಿಪುರ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನ. 4ರೊಳಗಾಗಿ ಸಲ್ಲಿಸುವಂತೆ ಶಿಕಾರಿಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿವಮೊಗ್ಗ ತಾಲೂಕಿನಲ್ಲಿ 6ರಿಂದ 16 ವರ್ಷದೊಳಗಿನ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಯನ್ನು ನ. 6 ಮತ್ತು 7ರಂದು ಹಾಗೂ ಕುಟುಂಬ ಸಮೀಕ್ಷೆಯನ್ನು ನ. 13ರಿಂದ 17ರವರೆಗೆ ನಡೆಸಲಿದೆ. ಗಣತಿದಾರರು ಸಮೀಕ್ಷೆಗಾಗಿ ಮನೆ- ಮನೆಗೆ ಭೇಟಿ ನೀಡಿದಾಗ ಕುಟುಂಬದ ಮುಖ್ಯಸ್ಥರು ತಮ್ಮ ಮಕ್ಕಳೊಂದಿಗೆ ಮನೆಯಲ್ಲಿ ಹಾಜರಿದ್ದು, ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಹಾಲಾನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಪ್ಪನಾಯಕ ಸೇನೆ ಅಸ್ವಿತ್ವಕ್ಕೆ
ಶಿವಮೊಗ್ಗ: ಪೊಲೀಸ್ ಇಲಾಖೆಯ ಸುಧಾರಣೆಯನ್ನೇ ಮೂಲ ಉದ್ದೇಶವಾಗಿ ಹೊಂದಿರುವ ಪ್ರಾಂಜಲ ಶಿವಪ್ಪನಾಯಕ ಸೇನೆ ಅಸ್ತಿತ್ವಕ್ಕೆ ಬಂದಿದೆ. ಪೊಲೀಸ್ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ, ರಜೆ ಪಡೆಯುವಲ್ಲಿ, ವೇತನದಲ್ಲಿ ಆಗಿರುವ ಲೋಪಗಳನ್ನು ಎತ್ತಿಹಿಡಿದು, ಅವುಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ನಿರ್ಧರಿಸಿದೆ. ನಗರದಲ್ಲಿ ಶುಕ್ರವಾರ ಸೇನೆಯ ಸಂಸ್ಥಾಪಕ, ನಿವೃತ್ತ ಸಬ್ ಇನ್ಸ್ಪೆಕ್ಟರ್ ಭದ್ರಾವತಿ ವಾಸು ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಇಲಾಖೆಯ ಹಲವು ನಿವೃತ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಇದೇ ನ. 25ರಂದು ಬಸ್ ನಿಲ್ದಾಣದಲ್ಲಿ ಪ್ರಾಂಜಲ ಶಿವಪ್ಪ ನಾಯಕ ಸೇನೆಯನ್ನು ವಿಭಿನ್ನವಾಗಿ ಉದ್ಘಾಟಿಸಲಾಗುವುದು ಎಂದರು.
ಬೇಡಿಕೆಗಳು: ಆರ್ಡ್ಲಿ ಪದ್ಧತಿಯನ್ನು ಸಂಪೂರ್ಣ ರದ್ದು ಮಾಡಿ ಅಗತ್ಯ ಸಿಬ್ಬಂದಿಯನ್ನು ಹೊರಗುತ್ತಿಗೆ ಏಜೆನ್ಸಿಯಿಂದ ಪಡೆಯಬೇಕು. ಪೊಲೀಸ್ ಸಿಬ್ಬಂದಿಗೆ ವಾರದ ರಜೆ ನೀಡಲು ಸಾಧ್ಯವಾಗದಿದ್ದಲ್ಲಿ, ಆ ಒಂದು ದಿನಕ್ಕೆ ಕೇರಳ ಮಾದರಿಯಲ್ಲಿ ವೇತನ ನೀಡಬೇಕು. ಯಾವುದೇ ಅಧಿಕಾರಿಯ ಖಾತೆಯಲ್ಲಿ ರಜೆ ಇದ್ದು ಅನಿವಾರ್ಯ ಕಾರಣದಿಂದ ಆ ವ್ಯಕ್ತಿ ಗೈರು ಹಾಜರಾದರೆ 20 ದಿನಗಳವರೆಗೆ ಸಂಬಳ ತಡೆಹಿಡಿಯುವುದನ್ನು ನಿಷೇಧಿಸಬೇಕು. ಎಎಸ್ಐಯಿಂದ ಹೆಚ್ಚುವರಿ ಎಸ್ಪಿವರೆಗಿನ ಎಲ್ಲಾ ಅಧಿಕಾರಿಗಳಿಗೂ ಒಂದು ತಿಂಗಳು ಹೆಚ್ಚುವರಿ ಸಂಬಳ ನೀಡಬೇಕು. ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಎಲ್ಲಾ ಅಧಿಕಾರಿಗಳಿಗೆ ಒಂದು ತಿಂಗಳು ಹೆಚ್ಚುವರಿ ಸಂಬಳ ನೀಡಬೇಕು ಎಂದು ಭದ್ರಾವತಿ ವಾಸು ಒತ್ತಾಯಿಸಿದ್ದಾರೆ