ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮಾರುಕಟ್ಟೆ ಸೌಲಭ್ಯವಿದ್ದಲ್ಲಿ ಅನುಕೂಲ'

Rashmi Kasaragodu
Updated On : 2 Nov 2013, 1:17 am

ಶಿವಮೊಗ್ಗ: ವ್ಯವಸ್ಥಿತವಾದ ಮಾರುಕಟ್ಟೆ ಸೌಲಭ್ಯವಿದ್ದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲಿದೆ. ಅಲ್ಲದೇ, ಕೃಷಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಪಿ.ಎಸ್. ವಸ್ತ್ರದ್ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಮಾರಾಟ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಮಾರುಕಟ್ಟೆ ಭಾಗಿದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ಶಾಸನಕ್ಕೆ ತಿದ್ದುಪಡಿ ತಂದ ನಂತರ ಕೃಷಿ ಮಾರುಕಟ್ಟೆ ಕ್ಷೇತ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಖಾಸಗಿ ಮಾರುಕಟ್ಟೆಗಳ ಸ್ಥಾಪನೆ, ನೇರ ಖರೀದಿ ಕೇಂದ್ರಗಳ ಸ್ಥಾಪನೆ, ಇ-ವ್ಯಾಪಾರಕ್ಕೆ ಅವಕಾಶ, ಒಪ್ಪಂದ ಕೃಷಿ ಮೊದಲಾದವುಗಳಿಗೆ ಅವಕಾಶ ದೊರೆತಂತಾಗಿದೆ ಎಂದರು.
ಕೃಷಿ ಉತ್ಪನ್ನ ಮಾರಾಟಕ್ಕಾಗಿ ಮಾರುಕಟ್ಟೆಯಲ್ಲಿ ಹೊಸ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ನೀಡಿದ ವರದಿಯನ್ನು ಸಚಿವ ಸಂಪುಟ ಸಮಿತಿ ಯಾವುದೇ ಆಕ್ಷೇಪಣೆಗಳಿಲ್ಲದೆ ಅನುಮೋದಿಸಿದೆಯಲ್ಲದೆ, ಈ ವರದಿ ಆಧಾರದ ಮೇಲೆ ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕೃಷಿ ಮಾರಾಟ ನೀತಿಯನ್ನು ಜಾರಿಗೊಳಿಸಿದ ರಾಜ್ಯ ನಮ್ಮದಾಗಿದೆ ಎಂದರು.
ಕೃಷಿ ಉತ್ಪನ್ನ ಮಾರಾಟದಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಸಮಾನತೆ, ಸರಳತೆ ತರುವುದು, ಕೃಷಿ ಉತ್ಪನ್ನಗಳ ವರ್ಗೀಕರಣ ಮತ್ತು ಗುಣಮಟ್ಟ ಪರೀಕ್ಷೆಗೆ ಅವಕಾಶ, ರೈತರು ತಾವಿರುವಲ್ಲಿಯೇ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಗೋದಾಮು ಆಧಾರಿತ ಮಾರಾಟ ಸೌಲಭ್ಯ, ಸಮರ್ಥ ಬೆಲೆ, ಮಾರಾಟ ಚಟುವಟಿಕೆಗಳಲ್ಲಿ ತೊಡಗಿರುವ ರೈತರು, ಖರೀದಿದಾರರು ಹಾಗೂ ದಲ್ಲಾಲರಿಗೂ ಅನುಕೂಲವಾಗುವಂತೆ ಕೃಷಿ ಮಾರಾಟ ನೀತಿಯನ್ನು ರೂಪಿಸಲಾಗಿದೆ ಎಂದರು.
ಈ ಸಭೆಯಲ್ಲಿ ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರ್. ಮನೋಜ್, ರಮೇಶ್ಚಂದ್ರ, ರಾಜ್ಯ ಕೃಷಿ ಮಾರಾಟ ಮಂಡಳಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಬಿ.ಕೆ.ಗೋಪಾಲಯ್ಯ, ಎನ್.ಆರ್. ಚಾಮರಾಜು, ಕೆ.ವಿ.ಎಂ. ಭಟ್, ಸಿ. ಪಾತಲಿಂಗಪ್ಪ ಸೇರಿದಂತೆ ಜಿಲ್ಲೆಯ ರೈತರು, ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement