'ಹಿರಿಯರ ಆರೈಕೆ ಎಲ್ಲರ ಜವಾಬ್ದಾರಿ'
ಶಿಕಾರಿಪುರ: ಸಮುದಾಯದ ನಿರ್ಲಕ್ಷ್ಯತೆಗೆ ಒಳಗಾಗುತ್ತಿರುವ ಹಿರಿಯ ನಾಗರಿಕರ ಆರೈಕೆಯ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣ ರೆಡ್ಡಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪೇಟೆ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲೆನಾಡು ಸೇವಾ ಸಂಸ್ಥೆ (ರಿ), ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ ನೌಕರರ ಸಂಘ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ - ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಬೃಹತ್ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಯೋವೃದ್ಧರ ಆರೋಗ್ಯ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಮತ್ತಿತರ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಹಿರಿಯರಿಗೆ, ವೃದ್ಧರಿಗೆ ಮಾನಸಿಕ ಧೈರ್ಯವನ್ನು ತುಂಬಬೇಕಾಗಿದೆ ಎಂದರು.
ಸಮುದಾಯದ ನಿರ್ಲಕ್ಷ್ಯದಿಂದ ಹಲವು ಹಿರಿಯ ಚೇತನಗಳು ಜೀವನದ ಅಂತ್ಯ ಕಾಲದಲ್ಲಿ ಕಷ್ಟದಿಂದ ಕಾಲ ತಳ್ಳುವ ದುಸ್ಥಿತಿ ಬಂದಿದೆ. ಜೀವನದ ಸಂಧ್ಯಾಕಾಲದಲ್ಲಿ ಅನಾರೋಗ್ಯ ಕಾಡುತ್ತಿರುತ್ತದೆ. ಆದ್ದರಿಂದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು ಹಿರಿಯ ನಾಗರಿಕರ ಆರೋಗ್ಯ,ಆರೈಕೆಗೆ ಹೆಚ್ಚಿನ ಮಹತ್ವ ನೀಡಿ ಹಮ್ಮಿಕೊಳ್ಳಲಾಗುವ ಶಿಬಿರಗಳು ಹಿರಿಯರಿಗೆ ಹೆಚ್ಚು ಉಪಯೋಗವಾಗಲಿದೆ ಎಂದರು. ಅದರಲ್ಲೂ ಕಣ್ಣಿನ ಚಿಕಿತ್ಸಾ ಶಿಬಿರಗಳು ಹಿರಿಯರ ಪಾಲಿಗೆ ಹೆಚ್ಚು ಸಾರ್ಥಕವಾಗಲಿದೆ ಎಂದರು.
ಮಲೆನಾಡು ಸೇವಾ ಸಂಸ್ಥೆಯ ಅಧ್ಯಕ್ಷ ಧನಂಜಯಾಚಾರ್ ಮಾತನಾಡಿ, ಸರ್ಕಾರಿ ನೌಕರರ ಸೇವಾ ಸಂಘಗಳು ಕೇವಲ ವೈಯುಕ್ತಿಕ ಹಾಗೂ ಸಿಬ್ಬಂದಿಯ ಹಿತಾಸಕ್ತಿಯನ್ನು ಮಾತ್ರ ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಾಲೂಕಿನ ಆರೋಗ್ಯ ಇಲಾಖಾ ನೌಕರರ ಸಂಘ ವಿಭಿನ್ನವಾಗಿ ಜನಪರ ಕಾಳಜಿಯ ಆರೋಗ್ಯ ಶಿಬಿರಕ್ಕೆ ಹೆಚ್ಚಿನ ಮಹತ್ವದ ಮೂಲಕ ಕಾಳಜಿಯನ್ನು ಮೆರೆಯುತ್ತಿದ್ದು ಸಮಾಜಮುಖಿ ಕಾರ್ಯಕ್ಕೆ ಎಲ್ಲಾ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಇಲಾಖಾ ನೌಕರರ ಸಂಘದ ಅಧ್ಯಕ್ಷ ಡಾ. ಹರ್ಷವರ್ಧನ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ. ಲಕ್ಷ್ಮಣ್ ರಾಥೋಡ್, ತಾ. ವೈದ್ಯಾಧಿಕಾರಿ ಡಾ. ನಾಗರಾಜ ನಾಯ್ಕ, ಡಾ. ಗುಡುದಪ್ಪ ಕಸವಿ, ಡಾ. ರುದ್ರೇಶ್, ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯ ಡಾ. ಅಜರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ 311 ಕಣ್ಣಿನ ರೋಗಿಗಳು ತಪಾಸಣೆ ನಡೆಸಿ ಅರ್ಹ 165 ಫಲಾನುಭವಿಗಳನ್ನು ಶಸ್ತ್ರ ಚಿಕಿತ್ಸೆಗಾಗಿ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಯಿತು.
ಜ್ಯೋತಿ, ಲಲಿತಾ ಪ್ರಾರ್ಥಿಸಿ, ಕುಮಾರಸ್ವಾಮಿ ಸ್ವಾಗತಿಸಿ, ಸುರೇಶ್ ಶೆಟ್ಟಿ ನಿರೂಪಿಸಿದರು. ಸೀತಾರಾಮಪ್ಪ ವಂದಿಸಿದರು.