ರಸ್ತೆ ಯೋಜನೆ ವಿಳಂಬ
ಹೊಸನಗರ: ಹಿನ್ನೀರು ತುಂಬಿ ಬಂತೆಂದರೆ ಸಂಪರ್ಕ ಕಳೆದುಕೊಳ್ಳುವ ತಾಲೂಕಿನ ನಗರ ಸಮೀಪದ ಬಾಳೆಕೊಪ್ಪಕ್ಕೆ ಸಂಪರ್ಕ ರಸ್ತೆ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಗ್ರಾಮಸ್ಥರು ಕೆಪಿಸಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಮಾಸ್ತಿಕಟ್ಟೆಯ ಕೆಪಿಸಿ ಕಚೇರಿಯಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ರಾಜಮುಡಿ ಅವರನ್ನು ಭೇಟಿ ಮಾಡಿದ ಸ್ಥಳೀಯ ಗ್ರಾಮಸ್ಥರು ಸಂಪರ್ಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಆಗುತ್ತಿರುವ ವಿಳಂಬದ ಬಗ್ಗೆ ಮಾತುಕತೆ ನಡೆಸಿದರು.
ಇದಕ್ಕೆ ಸ್ಪಂದಿಸಿದ ರಾಜಮುಡಿ ಈಗಾಗಲೇ ಕಾಮಗಾರಿ ನಡೆಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗಿದ್ದು, ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ. ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋಕೋಪಯೋಗಿ ಮತ್ತು ಕೆಪಿಸಿ ಮಧ್ಯೆ ಆಗಬೇಕಿರುವ ಒಡಂಬಡಿಕೆ ಬಗ್ಗೆ ಸ್ವಲ್ಪ ವಿಳಂಬವಾಗುತ್ತಿದೆ. ಕೆಪಿಸಿ ಕಡೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೂರು ದಶಕದ ಹೋರಾಟ: ಬಾಳೆಕೊಪ್ಪ, ಮುಂಡುಕೋಡು, ಸೂಲಿಕಲ್ಲು, ಕೆರೆಮಠ ಸೇರಿದಂತೆ ವಿವಿಧ ಗ್ರಾಮಗಳು ಮುಳುಗಡೆ ಬಂದ ನಂತರ ಸಂಪರ್ಕ ಕಳೆದುಕೊಳ್ಳುತ್ತವೆ. ಹೀಗಾಗಿ ಬದುಕಿಗಾಗಿ ಪರದಾಟಬೇಕಿದ್ದು, ಕೂಡಲೇ ಸಂಪರ್ಕ ರಸ್ತೆ ಕಲ್ಪಿಸುವಂತೆ ಕಳೆದ ಮೂರು ದಶಕಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಇದು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಮುಳುಗಡೆ ಹಿನ್ನೀರು ತಪ್ಪಲ್ಲಲ್ಲೇ ಹೋರಾಟವನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ.
ಕೆಪಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟ ಸ್ಥಗಿತಗೊಳಿಸಿದ್ದರು.
ಸಚಿವರ ಸೂಚನೆ: ಬಾಳೆಕೊಪ್ಪ ಸಂಪರ್ಕ ರಸ್ತೆ ನಿರ್ಮಾಣ ಸಂಬಂಧ ಸ್ಥಳೀಯ ನಿಯೋಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕೆಪಿಸಿ ಮತ್ತು ಲೋಕೋಪಯೋಗಿ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದ್ದಾರೆ.
ಕೆಪಿಸಿ ಅಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಎಪಿಎಂಸಿ ಸದಸ್ಯ ಸಿ. ರಾಮಚಂದ್ರರಾವ್, ಪ್ರಮುಖರಾದ ಯಡೂರು ರಾಜಾರಾಂ, ಬಾಳೆಕೊಪ್ಪ ಸುಬ್ಬಣ್ಣ, ಕಾಡಿಗ್ಗೇರಿ ರಾಮಸ್ವಾಮಿ, ಮುಂಡುಕೋಡು ರಾಜುಶೆಟ್ಟಿ, ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.