9ರಿಂದ ಛಾಯಾಚಿತ್ರಗಳ ಪ್ರದರ್ಶನ
ಶಿವಮೊಗ್ಗ: ಅಭ್ಯುದಯ ಮತ್ತು ಭಾರತೀಯ ವೈದ್ಯಕೀಯ ಸಂಘ ಆಶ್ರಯದಲ್ಲಿ ನ.9 ಮತ್ತು 10ರಂದು ರೆಕ್ಕೆ ಬಿಚ್ಚಿದ ಚಿತ್ರಗಳು ಶೀರ್ಷಿಕೆಯಡಿಯಲ್ಲಿ ಡಾ. ಶ್ರೀಕಾಂತ್ ಎನ್. ಹೆಗಡೆ ಮತ್ತು ಡಾ ಪಿ.ಕೆ. ಪೈ ಅವರು ಸೆರೆಹಿಡಿದ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನವನ್ನು ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ನ.9ರಂದು ಸಂಜೆ 4ರಿಂದ ನ.10ರ ರಾತ್ರಿ 9 ಗಂಟೆವರೆಗೆ ಪ್ರದರ್ಶನ ಇರುತ್ತದೆ. ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಛಾಯಾಯಗ್ರಾಹಕ ಅಮಚಿ ಲಕ್ಷ್ಮೀನಾರಾಯಣ ನೆರವೇರಿಸುವರು. ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಐಎಂಎ ಅಧ್ಯಕ್ಷೆ ಡಾ. ವಾಣಿ ಕೋರಿ, ಕಾರ್ಯದರ್ಶಿ ಡಾ. ಕೊಟ್ಟೂರೇಶ್ವರ ಉಪಸ್ಥಿತರಿರುವರು. ಅಭ್ಯುದಯ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಅಧ್ಯಕ್ಷತೆ ವಹಿಸುವರು.
--
ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಜಾಥಾ
ನರಸಿಂಹರಾಜಪುರ: ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಎಂಬ ಘೋಷಣೆಯೊಂದಿಗೆ ಪಟ್ಟಣದಲ್ಲಿ ವಿವಿಧ ಶಾಲೆಯ ಮಕ್ಕಳು ಮಂಗಳವಾರ ಮುಖ್ಯ ಬೀದಿಯಲ್ಲಿ ಜಾಥಾ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆಯ ಮಕ್ಕಳ ಜಾಥಾಕ್ಕೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಜೆ.ಜಿ. ನಾಗರಾಜ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಮೇಶ್, ಪಟ್ಟಣ ಪಂಚಾಯ್ತಿ ಸದಸ್ಯೆ ಸಮೀರಾ ನಹೀಂ, ತಾಲೂಕು ದೈಹಿಕ ಪರೀವೀಕ್ಷಕ ಕೆ. ಮೌನೇಶ್ವರಾಚಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಶಾಂತಪ್ಪ ಇದ್ದರು.