ಇಂದಿನಿಂದ ಸುಜ್ಞಾನದ ಬೆಳಕು
ಕ.ಪ್ರ.ವಾರ್ತೆ, ಶಿಕಾರಿಪುರ, ನ.5 ತಾಲೂಕಿನ ಗ್ರಾಮೀಣರಲ್ಲಿ ಕಾರ್ತಿಕ ಮಾಸದ ವಿಶೇಷತೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಆಯ್ದ ಗ್ರಾಮಗಳಲ್ಲಿ ಪಟ್ಟಣದ ಮುರುಘರಾಜೇಂದ್ರ ವಿರಕ್ತಮಠದಿಂದ ಕಾರ್ತಿಕ ಮಾಸದಲ್ಲಿ ಸುಜ್ಞಾನದ ಬೆಳಕು ಧಾರ್ಮಿಕ ಕಾರ್ಯಕ್ರಮವನ್ನು ತಿಂಗಳ ಕಾಲ ನಿತ್ಯ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ವಿರಕ್ತಮಠದ ಚನ್ನಬಸವ ಶ್ರೀ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ಹಿಂಸಾ ಪ್ರವೃತ್ತಿ ಹೆಚ್ಚಾಗಿದ್ದು, ದುರ್ನಡತೆ ಹೋಗಲಾಡಿಸಿ, ಸಂಪೂರ್ಣ ಸಮಾಜ ತಿದ್ದುವಲ್ಲಿ ಧರ್ಮ ಜಾಗೃತಿ ಅವಶ್ಯಕವಾಗಿದೆ ಎಂದರು.
ಇಂದು ಉದ್ಘಾಟನೆ: ನ. 6 ರ ಬುಧವಾರದಂದು ಬೆಳಗ್ಗೆ 10.30 ಕ್ಕೆ ತಾಲೂಕಿನ ಅಂಜನಾಪುರದಲ್ಲಿ ಆರಂಭವಾಗಲಿರುವ ಕಾರ್ಯಕ್ರಮವನ್ನು ಮಾಜಿ ಶಾಸಕ ಶಾಂತವೀರಪ್ಪಗೌಡ ಉದ್ಘಾಟಿಸಲಿದ್ದಾರೆ.
ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಚ್.ಟಿ. ಬಳಿಗಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಶ್ಚಂದ್ರ ಸ್ಥಾನಿಕ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಡಿ. ಭೂಕಾಂತ್, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ರುದ್ರಮುನಿ, ಎಸ್.ಎಚ್. ಮಂಜುನಾಥ್, ಬಸವರಾಜಪ್ಪ ಮುದ್ದನಹಳ್ಳಿ, ರಾ.ಸ.ನೌ. ಸಂಘದ ತಾಲೂಕು ಅಧ್ಯಕ್ಷ ಚಿನ್ನಪ್ಪ, ಬಸವಕೇಂದ್ರದ ಅಧ್ಯಕ್ಷ ಸಾಲೂರು ಕುಮಾರ್, ಗ್ರಾಪಂ ಉಪಾಧ್ಯಕ್ಷೆ ರೇಖಾ, ಸಂಗಪ್ಪ, ಪಲ್ಲವಿಬಾಯಿ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಾಚಾರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಆಯ್ದ ಹಳ್ಳಿಗಳಲ್ಲಿ ತಿಂಗಳ ಕಾಲ ಸತತವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿತ್ಯ ಸಂಜೆ ಸಮಾಜದಲ್ಲಿನ ಪ್ರತಿಭಾನ್ವಿತರು, ಚಿಂತಕರಿಂದ ಧರ್ಮದ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ತಾ.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಭಾಶ್ಚಂದ್ರ ಸ್ಥಾನಿಕ್ ಮಾತನಾಡಿದರು.
ಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಸಾಲೂರು ಕುಮಾರ್, ಜಗಜ್ಯೋತಿ ಬಸವೇಶ್ವರ ಯುವ ಬಳಗದ ಅಧ್ಯಕ್ಷ ಮಹೇಶ್ ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.