ಡೆಂಘೀ ನಿಯಂತ್ರಣಕ್ಕೆ ತುರ್ತು ಸಭೆ
ಕ.ಪ್ರ. ವಾರ್ತೆ, ಸಾಗರ, ನ.5
ಡೆಂಘೀಗೆ ಸಂಬಂಧಪಟ್ಟಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಮಂಗಳವಾರ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಚರ್ಚೆ ನಡೆಸಿದರು.
ತಾಲೂಕಿನಲ್ಲಿ ಈ ತನಕ 62ಕ್ಕೂ ಹೆಚ್ಚಿನ ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಮಾಹಿತಿಯಂತೆ ಭೀಮನೇರಿ ಹಾಗೂ ಆನಂದಪುರಂನಲ್ಲಿ ಶಂಕಿತ ಇಬ್ಬರು ಮೃತಪಟ್ಟಿದ್ದಾರೆ. ತಾಲೂಕು ಆಡಳಿತ ಡೆಂಘೀ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಪ್ರತಿ ಗ್ರಾಮದಲ್ಲೂ ಡೆಂಘೀ ಹರಡುವಿಕೆ, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ನಗರದ 31 ವಾರ್ಡ್ನಲ್ಲೂ ಸ್ಥಳೀಯ ಸದಸ್ಯರ ಉಪಸ್ಥಿತಿಯಲ್ಲಿ ಸಮಿತಿ ರಚಿಸಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ತಕ್ಷಣ ಆರಂಭವಾಗಬೇಕು. ಸ್ಥಳೀಯ ಆಸ್ಪತ್ರೆಯಲ್ಲಿ ಡೆಂಘೀ ಕಾಯಿಲೆಗೊಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ಸಮರ್ಪಕವಾದ ಔಷಧಿಯನ್ನು ಸಂಗ್ರಹಿಸಿಕೊಳ್ಳುವಂತೆ ಅವರು ಆದೇಶ ಮಾಡಿದರು.
ಕ್ರಮಕ್ಕೆ ಸೂಚನೆ: ಪಟ್ಟಣ ವ್ಯಾಪ್ತಿಯಲ್ಲಿ ಖಾಲಿಯಿರುವ ಖಾಸಗಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಅಲ್ಲದೆ ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್, ಎಳನೀರಿನ ಖಾಲಿ ಬೊಂಡೆ, ಟಯರ್ಗಳು ಬಿದ್ದಿದ್ದು ಅವುಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ.
ಅಂತಹ ನಿವೇಶನ ಮಾಲೀಕರಿಗೆ ತಕ್ಷಣ ನೋಟಿಸ್ ನೀಡಿ ನಿವೇಶವನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಬೇಕು.
ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಇರಿಸಿಕೊಂಡು ಸಭೆ ನಡೆಸಿ, ಪ್ರತಿಮನೆಗೆ ಡೆಂಘೀ ನಿಯಂತ್ರಣಕ್ಕೆ ಸಂಬಂಧಪಟ್ಟಂತಹ ಕರಪತ್ರ ಹಂಚುವ ಕೆಲಸವಾಗಬೇಕು. ಪ್ರತಿದಿನ ಫಾಗಿಂಗ್, ಮೆಲಾಥಿನ್ ಔಷಧ ಸಿಂಪಡಣೆ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಮಾತನಾಡಿ, ಡೆಂಘೀ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ತಾಲೂಕು ಆಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಪ್ರತಿ ಭಾಗದಲ್ಲಿ ಸ್ಥಳೀಯರು ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ತಂಡ ರಚಿಸಿ, ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮಳೆ ನಿಂತಿದ್ದರಿಂದ ಡೆಂಘೀ ಪ್ರಕರಣ ಕಡಿಮೆಯಾಗಿತ್ತು. ಆದರೆ ಮಳೆ ಬಿಟ್ಟುಬಿಟ್ಟು ಬರುತ್ತಿದ್ದರಿಂದ ಮತ್ತೆ ಡೆಂಘೀ ಕಾಣಿಸಿಕೊಂಡಿರುವ ಸಾಧ್ಯತೆ ಇದ್ದು, ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಾಜಿದ್ ಅಹಮದ್ ಮುಲ್ಲಾ, ಪ್ರಭಾರಿ ಪೌರಾಯುಕ್ತ ಪೂವಯ್ಯ, ಪರಿಸರ ಅಭಿಯಂತರ ಪ್ರಭಾಕರ್, ಆರೋಗ್ಯ ನಿರೀಕ್ಷಕರಾದ ಅರುಣಕುಮಾರ್, ಗುರುಪ್ರಸಾದ್ ಇತರರಿದ್ದರು.