ನಾಳೆಯಿಂದ ಸಿಮ್ಸ್ನಲ್ಲಿ ವಸ್ತುಪ್ರದರ್ಶನ
ಶಿವಮೊಗ್ಗ: ವೈದ್ಯಕೀಯ ಲೋಕದ ವಿಸ್ಮಯಗಳನ್ನು ಸರಳೀಕರಣಗೊಳಿಸಿ, ವಿದ್ಯಾರ್ಥಿಗಳಿಗೂ, ಸಾಮಾನ್ಯ ಜನತೆಗೂ ಪರಿಚಯಿಸುವ ಮತ್ತು ಸಾಮಾನ್ಯ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಮಾಹಿತಿಗಳನ್ನು ನೀಡುವ ಅಪರೂಪ ಎನ್ನಬಹುದಾದ ವಸ್ತುಪ್ರದರ್ಶನ ನಗರದಲ್ಲಿ ಆಯೋಜನೆಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಕೆ.ಎಸ್. ಗಂಗಾಧರ್, ನವೆಂಬರ್ 7ರಿಂದ 9ರ ವರೆಗೆ ನಡೆಯುವ ಪ್ರದರ್ಶನ ವಿಶೇಷವಾಗಿದ್ದು, ಸಾಮಾಜಿಕ ಕಳಕಳಿ, ಜಾಗೃತಿ ಉದ್ದೇಶ ಹೊಂದಲಾಗಿದೆ ಎಂದರು. ವೈದ್ಯಕೀಯ ಕ್ಷೇತ್ರದ ಅಂಗರಚನಾ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಶಸ್ತ್ರ ಚಿಕಿತ್ಸಾ ಶಾಸ್ತ್ರ, ಅರವಳಿಕೆ ಶಾಸ್ತ್ರ, ಮನೋವಿಜ್ಞಾನ ಸೇರಿದಂತೆ ಸುಮಾರು 21 ವಿಭಾಗಗಳ ವಿಷಯಗಳ ಪ್ರದರ್ಶನಕ್ಕಿಡಲಾಗುವುದು. ವೈದ್ಯಕೀಯ ಹಾಗೂ ಸ್ವಾಸ್ಥ್ಯ ಸಂಬಂಧಿ ವಿಷಯಗಳನ್ನು ಥರ್ಮಾಕೋಲ್ ಮಾದರಿ, ಮಣ್ಣಿನ ಮಾದರಿ, ಭಿತ್ತಿ ಚಿತ್ರಗಳು ಇತ್ಯಾದಿಗಳ ಮೂಲಕ ಪ್ರದರ್ಶಿಸಿ ವೈದ್ಯಕೀಯ ಲೋಕದ ಚಿತ್ರಣಗಳನ್ನು ನೀಡುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.