ಕನ್ನಡ ರಾಜ್ಯೋತ್ಸವ ಆಚರಣೆ
ಕ.ಪ್ರ.ವಾರ್ತೆ , ಸೊರಬ , ನ. 7
ಹಣವಿಲ್ಲದಿದ್ದರೂ ಬದುಕಬಲ್ಲೆವು ಎಂಬ ಛಲ ಮಲೆನಾಡಿಗರಿಗಿದ್ದು, ಇಂತಹ ಸ್ಥೈರ್ಯವನ್ನು ನಾವು ಇಲ್ಲಿ ಮಾತ್ರ ನೋಡಲು ಸಾಧ್ಯ ಎಂದು ತಾಲೂಕು ಬಾಡದಬೈಲು ನಂದೀಶ್ವರ ಶ್ರೀಗಳು ತಿಳಿಸಿದರು.
ಕೋಣನಮನೆಯಲ್ಲಿ ಜಟ್ಟೇಶ್ವರ ಕನ್ನಡಪರ ಯುವಕರ ವಾಲಿಬಾಲ್ ಸಂಘ ಹಾಗೂ ಇಲ್ಲಿನ ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರು ಆಚರಿಸಿದ ಕನ್ನಡ ರಾಜ್ಯೋತ್ಸವ ಹಾಗೂ ಅಂತರ್ ತಾಲೂಕು ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರೀಡೆ ಮೂಲಕ ಪಕ್ವ: ಸಂಪಾದನೆಗೆ ಮಾಧ್ಯಮವಾಗಿರುವ ದೇಹವನ್ನು ಕ್ರೀಡೆಯ ಮೂಲಕ ಪಕ್ವಗೊಳಿಸಬಹುದು, ಇಂತಹ ಪಕ್ವತೆ ನಮ್ಮ ಆತ್ಮಶುದ್ಧಿಗೆ ನೆರವಾಗುತ್ತದೆ. ಹಲವು ವೈವಿಧ್ಯತೆಗಳ ನಡುವೆಯೂ ಏಕತೆ ಒದಗಿಸಿಕೊಡುವ ಆಟೋಟಗಳು ಇಂದಿಗೂ ಗ್ರಾಮೀಣ ಭಾಗದಲ್ಲಿ ಸಂಘಟನೆ ಮೂಲಕ ಜೀವಂತವಾಗಿರುವುದು ಮೆಚ್ಚುವ ಸಂಗತಿ. ಯುವಶಕ್ತಿ ಇಂತಹ ಕ್ರಿಯಾಶೀಲ ಚಟುವಟಿಕೆ ಬೆಳೆಸುವ, ಬಳಸುವ ಮೂಲಕ ಗ್ರಾಮದ ಏಕತೆಗೆ ಮುಂದಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇತಿಹಾಸ ತಜ್ಞ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿದರು. ಕಾರ್ಯಕ್ರಮವನ್ನು ಹೆಚ್ಚೆ ಗ್ರಾಪಂ ಅಧ್ಯಕ್ಷ ಜಯಶೀಲಗೌಡ ಉದ್ಘಾಟಿಸಿದರು. ಮುಟಗುಪ್ಪೆ ಗ್ರಾಪಂ ಸದಸ್ಯ ಸತ್ಯನಾರಾಯಣ, ಬೆಂಗಳೂರು ಬಿಎಂಟಿಸಿ ತಾಂತ್ರಿಕ ವಿಭಾಗದ ಸಿ.ಕೆ. ಸಂತೋಷ್ ಕುಮಾರ್ ಮಾತನಾಡಿದರು. ಗ್ರಾಮದ ಪ್ರಮುಖರು, ಮುಖಂಡರು ಸೇರಿದಂತೆ ಹಲವರು ಇದ್ದರು.
ಲಿಂಗರಾಜಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೂಲ್ಯ ಸಂಗಡಿಗರು ಪ್ರಾರ್ಥಿಸಿದರು. ದಾನಶೇಖರ್ ಸ್ವಾಗತಿಸಿದರು. ದೇವರಾಜ್ ವಂದಿಸಿದರು.