ಮರಳು ಪರವಾನಗಿಗೆ ಆಗ್ರಹಿಸಿ ಪ್ರತಿಭಟನೆ
ಹೊಸನಗರ: ಮರಳು ಸಾಗಾಟಕ್ಕೆ ಪರವಾನಗಿ ನೀಡುವಂತೆ ಆಗ್ರಹಿಸಿ ತಾಲೂಕು ಕಟ್ಟಡ ಸಾಮಗ್ರಿಗಳ ಸರಬರಾಜು ಲಾರಿ ಮಾಲೀಕರ ಸಂಘ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಸಂಘದ ಅಧ್ಯಕ್ಷ ಹಿಟಾಚಿ ಶ್ರೀಥರ್ ಮಾತನಾಡಿ, ಮಳೆಗಾಲ ಮುಗಿದು 2 ತಿಂಗಳು ಕಳೆದರೂ ಮರಳು ಸಾಗಾಟಕ್ಕೆ ಪರವಾನಗಿ ನೀಡುತ್ತಿಲ್ಲ.
ಇದರಿಂದ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಲಾರಿ ನಡೆಸುತ್ತಿರುವ ಮಾಲೀಕರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಅನೇಕ ಬಾರಿ ಮನವಿ ಮಾಡಿದರೂ ಕವಡೆ ಕಾಸಿನ ಉಪಯೋಗವಿಲ್ಲಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
200 ಲಾರಿ: ಜಿಪಿಎಸ್ ಅಳವಡಿಸಿದ ಸುಮಾರು 200 ಲಾರಿಗಳು ಕೆಲಸವಿಲ್ಲದೆ ಶೆಡ್‌ನಲ್ಲಿ ನಿಲ್ಲುವಂತಾಗಿದೆ. ಲಾರಿ ಮಾಲೀಕರ ನೆರವಿಗೆ ಬರುವಂತೆ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿದೆ. ಆದರೆ ಕೋರ್ಟ್ ನೆಪ ಹೇಳಿ ಪರವಾನಗಿ ನೀಡುತ್ತಿಲ್ಲ. ಹೀಗೆಯೇ ಮುಂದುವರಿದರೆ ಸಾಲ ಮಾಡಿಕೊಂಡು ಬರಡಾಗಿರುವ ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯ ಎಂಬಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ಉಡುಪಿ, ದಾವಣಗೆರೆ ಸೇರಿದಂತೆ ಹೊರಜಿಲ್ಲೆಗಳಲ್ಲಿ ಮರಳು ಸಾಗಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ ನ್ಯಾಯಸಮ್ಮತವಾಗಿ ನಮಗೆ ಪರವಾನಿಗೆ ನೀಡಲು ಮಾತ್ರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ನಮ್ಮ ಬದುಕಿಗಾಗಿ ಮರಳು ಪರವಾನಗಿ ಬೇಕಿದ್ದು, ಸಿಗುವವರೆಗೆ ನಮ್ಮ ಲಾರಿಗಳನ್ನು ತಾಲೂಕು ಕಚೇರಿ ಮುಂಭಾಗ ನಿಲ್ಲಿಸಿ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಸಂಘದ ಕಾರ್ಯದರ್ಶಿ ಅನ್ವರ್, ಶಂಕರನಾರಾಯಣ, ದಿವಾಕರ ಭಟ್, ಸಣ್ಣಕ್ಕಿ ಮಂಜು, ವಿಜಯ್, ಗುರು ಮೊದಲಾದವರು ಪಾಲ್ಗೊಂಡಿದ್ದರು.