ಮೂಲ ಸೌಕರ್ಯ ಒದಗಿಸಲು ಆದ್ಯತೆ: ಮಧು
ಕ.ಪ್ರ.ವಾರ್ತೆ , ಸೊರಬ , ನ. 7
ಚುನಾವಣಾ ಸಮಯದಲ್ಲಿ ಮಾತ್ರ ಪಕ್ಷ ರಾಜಕೀಯ ಇರಿಸಿಕೊಂಡು, ಚುನಾವಣೆ ಮುಗಿದ ಬಳಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶ್ರಮಿಸಬೇಕಾದುದು ಜನಪ್ರತಿನಿಧಿಯಾದವನ ಆದ್ಯ ಕರ್ತವ್ಯವಾಗಬೇಕು ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕು ಹಿರಳೆ, ಮೂಡುಗೋಡು, ರಾಮಗೊಂಡನಕೊಪ್ಪ, ಕುಂಬತ್ತಿ ಗ್ರಾಮಗಳಲ್ಲಿ ಒಟ್ಟು 1.10 ಕೋಟಿ ವೆಚ್ಚದ ಕಾಮಗಾರಿ, ಪಟ್ಟಣದ ಪ್ರಥಮ ದರ್ಜೆ ಕಾಲೇಜು ಹೆಚ್ಚುವರಿ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರಸಕ್ತ 2 ವರ್ಷಗಳ ಕಾಲ ಕ್ಷೇತ್ರದ ಮೂಲ ಸಮಸ್ಯೆಗಳಾದ ನೀರು ಮತ್ತು ರಸ್ತೆ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುತ್ತದೆ. ನಂತರ ಗ್ರಾಮಾಂತರ ಪ್ರದೇಶಗಳ ಇನ್ನಿತರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಾಗಿ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಇನ್ನೊಂದು ವಾರದೊಳಗೆ ಅಗತ್ಯವಿರುವ ಗ್ರಾಮ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸಿಕೊಡಲಾಗುವುದು. ಸರ್ಕಾರದಿಂದ ಬಂದ ಅನುದಾನವನ್ನು ಹಂತ- ಹಂತವಾಗಿ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.
ಹೆಗ್ಗೋಡು ಗ್ರಾಪಂ ವತಿಯಿಂದ ಶೇ. 20ರ ಅನುದಾನದಡಿಯಲ್ಲಿ ಎಸ್ಸಿ- ಎಸ್ಟಿ ಫಲಾನುಭವಿಗಳಿಗೆ ಸಿಲಿಂಡರ್ ವಿತರಿಸಲಾಯಿತು.
ಜಿಪಂ ಸದಸ್ಯ ಹುನವಳ್ಳಿ ಗಂಗಾಧರಪ್ಪ, ಗ್ರಾಮಸಭೆ ವೇಳೆ ಗ್ರಾಮದ ಸಮಸ್ಯೆ, ಅಗತ್ಯಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ಜನತೆ ತಂದರೆ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಡಲು ಸಾಧ್ಯ ಎಂದರು.
ತಾಪಂ ಅಧ್ಯಕ್ಷ ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ, ಸದಸ್ಯ ಬರಗಿ ನಿಂಗಪ್ಪ, ಆಯಾ ವ್ಯಾಪ್ತಿ ಗ್ರಾಪಂ ಸದಸ್ಯ ಪದಾಧಿಕಾರಿಗಳು, ಮುಖಂಡರು, ಅಧಿಕಾರಿಗಳು ಮೊದಲಾದವರು ಇದ್ದರು.