ಶಿವಮೊಗ್ಗಕ್ಕೂ ಬಂತು 24X7 ಬ್ಯಾಂಕ್
ಶಿವಮೊಗ್ಗ: ಹಗಲು ರಾತ್ರಿ ಎನ್ನದೇ ಬ್ಯಾಂಕಿಂಗ್ ವ್ಯವಹಾರ ಮಾಡುವಂತಿದ್ದರೆ ಹೇಗೆ ಸಮಯವಾದಾಗ ಬಂದು ಹಣವನ್ನು ಖಾತೆಗೆ ಪಾವತಿ ಮಾಡುವಂತಿದ್ದರೆ ಎಷ್ಟು ಚೆನ್ನ- ಈ ರೀತಿಯ 24X7 ಬ್ಯಾಂಕಿಂಗ್ ಸೌಲಭ್ಯ ಈಗ ಶಿವಮೊಗ್ಗದವರಿಗೆ ಲಭ್ಯವಾಗಿದೆ. ಜಿಲ್ಲೆಯ ಮೊಟ್ಟಮೊದಲ ಇ-ಲಾಂಜ್ ಕೇಂದ್ರವನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.
ನಗರದ ವಿನೋಬನಗರ ಬಡಾವಣೆಯ ಸೂಡಾ ಕಾಂಪ್ಲೆಕ್ಸ್ನ ಮಳಿಗೆಯೊಂದರಲ್ಲಿ ಆರಂಭವಾಗಲಿರುವ ಇ-ಲಾಂಜ್ ಕೇಂದ್ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಲೋಕಾರ್ಪಣೆಯಾಗುವುದು. ಇದರೊಂದಿಗೆ ಇ-ಲಾಂಜ್ ಸೌಲಭ್ಯ ಪಡೆದ ರಾಜ್ಯದ ಬೆರಳೇಣಿಕೆಯಷ್ಟು ನಗರಗಳ ಸಾಲಿಗೆ ಶಿವಮೊಗ್ಗ ಸೇರಿದಂತಾಗಿದೆ.
ಏನೇನಿದೆ?: ಯಾವಾಗ ಬೇಕೆಂದರೂ ಹಣ ಪಡೆಯುವ ಎಟಿಎಂಗಳು ಎಲ್ಲೆಡೆ ಸಾಮಾನ್ಯ. ಆದರೆ ಇ-ಲಾಂಜ್ ಕೇಂದ್ರದಲ್ಲಿ ಎಟಿಎಂ ಮಾತ್ರವಲ್ಲದೇ ಹಣ ಪಾವತಿಯ ಸೌಲಭ್ಯವೂ ಇರುತ್ತದೆ. ಹಣವನ್ನು ನಗದು ಅಥವಾ ಚೆಕ್ ಮೂಲಕವೂ ಇಲ್ಲಿ ಪಾವತಿಸಬಹುದು.
ಹಣ ಪಾವತಿ ಮಾಡಿದ್ದಕ್ಕೆ ಗ್ಯಾರೆಂಟಿ ಏನು ಎಂಬ ಪ್ರಶ್ನೆ ಬೇಡ. ಏಕೆಂದರೆ ಪಾವತಿ ಮಾಡಿದ ಕೂಡಲೇ ರಶೀದಿಯೂ ಇಲ್ಲಿ ಸಿಗುತ್ತದೆ. ಚೆಕ್ ಸ್ಕ್ಯಾನ್ ಆಗಿ ಮರುದಿನವೇ ಕ್ಲಿಯರೆನ್ಸ್ಗೆ ಹೋಗುತ್ತದೆ. ಇದರ ಜತೆಗೆ ನೆಟ್ ಬ್ಯಾಂಕಿಂಗ್, ಇ ಸ್ಟಾಂಪಿಂಗ್, ಕ್ಲಿಯರಿಂಗ್ ಸೆಲ್, ಪಾಸ್ ಬುಕ್ ಪ್ರಿಂಟಿಂಗ್, ಆನ್ ಲೈನ್ ಟ್ರೇಡಿಂಗ್ ಸೌಲಭ್ಯವೂ ಸೇರಿದಂತೆ ಹಲವು ಸಾಧ್ಯತೆಗಳು ಇಲ್ಲಿವೆ.
ಕೆನರಾ ಬ್ಯಾಂಕಿನ ಯಾವುದೇ ಊರಿನ, ಯಾವುದೇ ಶಾಖೆಯಲ್ಲಿ ನಿಮ್ಮ ಖಾತೆ ಇದ್ದರೂ ಸಹ ಇ-ಲಾಂಜ್ ಕೇಂದ್ರದಿಂದ ಸಮಯಾತೀತವಾಗಿ ವ್ಯವಹರಿಸಬಹುದು.
ಇಷ್ಟೆಲ್ಲಾ ಪ್ರಕ್ರಿಯೆ ಯಾಂತ್ರೀಕೃತವಾಗಿಯೇ ನಡೆಯುತ್ತದೆ. ಭದ್ರತೆ ಸಿಬ್ಬಂದಿ ಹೊರತುಪಡಿಸಿ ಬ್ಯಾಂಕಿನ ಯಾವ ಸಿಬ್ಬಂದಿಯೂ ಇಲ್ಲಿ ಇರುವುದಿಲ್ಲ. ಆಗಾಗ್ಗೆ ಬ್ಯಾಂಕಿನ ಸಿಬ್ಬಂದಿ ಈ ಕೇಂದ್ರಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.
ಶಿವಮೊಗ್ಗದಲ್ಲಿ ಇ-ಲಾಂಜ್ ಕೇಂದ್ರ ಆರಂಭಿಸಬೇಕೆನ್ನುವುದು ಬ್ಯಾಂಕಿನ ಉಪಮಹಾಪ್ರಬಂಧಕ ಎಂ.ಎಂ. ಚಿನಿವಾರ್ ಅವರ ಆಶಯವಾಗಿತ್ತು. ಶಿವಮೊಗ್ಗವು ಸುಶಿಕ್ಷಿತರ ಊರಾಗಿದ್ದು, ಈ ರೀತಿಯ ಕೇಂದ್ರ ನಿಜಕ್ಕೂ ಗ್ರಾಹಕರಿಗೆ ಅನುಕೂಲಕರ ಎಂಬುದು ಅವರ ಅಭಿಮತ.
ಇವರೇನಂತಾರೆ?
ರಾಜ್ಯಾದ್ಯಂತ ಕನಿಷ್ಠ 100 ಇ-ಲಾಂಜ್ ಕೇಂದ್ರಗಳನ್ನು ಆರಂಭಿಸಲು ಕೆನರಾ ಬ್ಯಾಂಕ್ ಉದ್ದೇಶಿಸಿದೆ. ಇಂತಹ ಕೇಂದ್ರಗಳಿಂದ ಗ್ರಾಹಕರಿಗೆ, ಅದರಲ್ಲಿಯೂ ವ್ಯಾಪಾರಸ್ಥರಿಗೆ ಅನುಕೂಲ. ಅವರು ಸಂಜೆ ತಮ್ಮ ವ್ಯವಹಾರ ಮುಗಿಸಿಕೊಂಡು ರಾತ್ರಿಯೇ ಖಾತೆಗೆ ಹಣ ಪಾವತಿ ಮಾಡಬಹುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬರಾವ್ ಹೇಳುತ್ತಾರೆ. ಶಾಖೆಗಳಲ್ಲಿ ಸರದಿ ಸಾಲಿನಲ್ಲಿ ಕಾದು ಹಣ ಪಾವತಿ ಮಾಡುವ, ಹಣ ಪಡೆಯುವ ಕೆಲಸ ಇನ್ನು ಕಡಿಮೆಯಾಗಲಿದೆ. ಇಂತಹ ಕೇಂದ್ರಗಳಿಂದ ಬ್ಯಾಂಕ್ ಸಿಬ್ಬಂದಿ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ ಎಂದು ಅವರು 'ಕನ್ನಡಪ್ರಭ'ಕ್ಕೆ ಹೇಳಿದರು.
-ಹೊನ್ನಾಳಿ ಚಂದ್ರಶೇಖರ್