ಸಂಪೂರ್ಣ ಹದಗೆಟ್ಟ ಮಾಸ್ತಿಕಟ್ಟೆ ರಸ್ತೆ
ಕ.ಪ್ರ.ವಾರ್ತೆ, ಹೊಸನಗರ, ನ.7 ತಾಲೂಕಿನ ನಗರದಿಂದ ಮಾಸ್ತಿಕಟ್ಟೆ ಮಾರ್ಗದ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಂಡಗಳ ನಡುವೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಸ್ತಿಕಟ್ಟೆ ಮಾರ್ಗ ಅತ್ಯಂತ ವಾಹನ ದಟ್ಟಣೆ ಇರುವ ಪ್ರದೇಶವಾಗಿದ್ದು, ಏಳೆಂಟು ವರ್ಷದ ಹಿಂದೆ ಡಾಂಬರೀಕರಣ ಆಗಿದ್ದು ಬಿಟ್ಟರೆ ಮತ್ತೆ ಈವರೆಗೆ ಆಗಿಲ್ಲ. ಇದರಿಂದಾಗಿ ರಸ್ತೆ ಸಂಪೂರ್ಣ ಜಖಂಗೊಂಡಿದ್ದು, ವಾಹನ ಓಡಾಟ ತೀರ ದುಸ್ತರವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಅಧಿಕಾರಿಗಳು ಭೇಟಿ ನೀಡಲಿ:
ಶಿವಮೊಗ್ಗದಿಂದ ಉಡುಪಿ ಜಿಲ್ಲೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ರಸ್ತೆ ದುಸ್ಥಿತಿಯನ್ನು ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿ. ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಕಾರಣ ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಪರ್ಕ ಸಾಧಿಸುವುದು ಭಾರೀ ಸಾಹಸದಂತಾಗಿತ್ತು. ಮಳೆ ನಿಂತ ಮೇಲಾದರು ರಸ್ತೆ ದುರಸ್ತಿಯಾಗಬಹುದು ಎಂಬ ನಿರೀಕ್ಷೆ ಇತ್ತಾದರೂ ಅದು ಈವರೆಗೆ ಈಡೇರಿಲ್ಲ ಎಂದು ಆರೋಪಿಸಿದರು.
ಮಾಸ್ತಿಕಟ್ಟೆ ಮಾರ್ಗದಂತೆ ಕೊಲ್ಲೂರು ಮಾರ್ಗದ ರಸ್ತೆ ಕೂಡ ಹೊರತಾಗಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಕಾಮಗಾರಿಗೆ ಟೆಂಡರ್ ಆಗಿದೆ ಎನ್ನುತ್ತಾರೆಯೇ ಹೊರತು, ಇಲ್ಲಿಯವರೆಗೆ ಕಾಮಗಾರಿ ಆರಂಭಗೊಳ್ಳುವ ಲಕ್ಷಣ ಗೋಚರಿಸಿಲ್ಲ. ಶಿಕ್ಷಣ ಸಚಿವರ ತವರಲ್ಲೇ ಹೀಗಾದರೆ ಹೇಗೆ ಎಂದು ಪ್ರಶ್ನಿಸಿರುವ ಗ್ರಾಮಸ್ಥರು ಕೂಡಲೇ ಅಧಿಕಾರಿಗಳು ಭೇಟಿ ಕೊಟ್ಟು ತುರ್ತು ಕಾಮಗಾರಿ ಕೈಗೊಳ್ಳಲಿ, ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಮಾಸ್ತಿಕಟ್ಟೆ ಮತ್ತು ಕೊಲ್ಲೂರು ಮಾರ್ಗದ ಗ್ರಾಮಸ್ಥರು ಎಚ್ಚರಿಸಿದ್ದಾರೆ.