ಸಮಾಜ ದಿಕ್ಕು ತಪ್ಪಿಸುವ ಮೂಢನಂಬಿಕೆ
ಸಾಗರ: ಮೂಢನಂಬಿಕೆ, ಅಂಧವಿಶ್ವಾಸ ತುಂಬುವ ಹಾಗೂ ಮಾಟಮಂತ್ರದ ಮೂಲಕ ಸಮಾಜವನ್ನು ದಿಕ್ಕು ತಪ್ಪಿಸುವ ಗುರುಗಳನ್ನು ಜನರು ನಂಬಬಾರದು ಎಂದು ಕೆಳದಿ ರಾಜಗುರು ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ಬಿ.ಎಚ್.ರಸ್ತೆಯಲ್ಲಿ ಬುಧವಾರ ನೂತನ ಮಠಗದ್ದೆ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಗುದ್ದಲಿಪೂಜೆ ನೆರವೇರಿಸಿ, ಮಾಟಮಂತ್ರದಂತಹ ಕೆಟ್ಟ ಸಂಸ್ಕೃತಿ ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ. ಮಾಟಮಂತ್ರದ ಹೆಸರಿನಲ್ಲಿ ಸಮಾಜಕ್ಕೆ ಮೋಸ ಮಾಡುತ್ತಿರುವವರ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಹೇಳಿದರು.
ಮನುಷ್ಯ ಸಾತ್ವಿಕ ಪೂಜೆಯತ್ತ ಹೆಚ್ಚು ಗಮನ ಕೊಡಬೇಕು. ಬಲಿಯೇ ಪ್ರಧಾನವಾಗಿರುವ ತಾಮಸಿಕ ಪೂಜೆಯಿಂದ ಖಂಡಿತಾ ಫಲ ಸಿಗುವುದಿಲ್ಲ. ಸಾತ್ವಿಕ ಪೂಜೆಯಲ್ಲಿ ಹಿಂಸೆಗೆ ಅವಕಾಶ ಇರುವುದಿಲ್ಲ. ತಾಮಸಿಕ ಪೂಜೆಯ ಮೂಲಕ ಕ್ರಾಂತಿಗೆ ಆಹ್ವಾನ ನೀಡುವ ಕೆಲಸದಿಂದ ಭಕ್ತರು ದೂರ ಇರಬೇಕು. ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನಾವು ದೇವರ ಸನ್ನಿಧಾನದಲ್ಲಿ ತನು ಮನ ಧನವನ್ನು ಸಮರ್ಪಣೆ ಮಾಡಬೇಕು. ದೇವರ ಸನ್ನಿಧಾನಕ್ಕೆ ನಡೆದುಕೊಂಡು ಬರುವುದರಿಂದ ತನು ಶುದ್ದಿಯಾಗುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದರಿಂದ ಮನ ಶುದ್ಧಿಯಾಗುತ್ತದೆ. ನಮ್ಮಲ್ಲಿರುವ ಹಣವನ್ನು ಅನಾಥರಿಗೆ ದಾನ ಮಾಡುವುದರಿಂದ ಧನ ಶುದ್ಧಿಯಾಗುತ್ತದೆ. ತನು ಮನ ಧನ ಶುದ್ಧಿಯಾದಾಗ ಮಾತ್ರ ಭಾವ ಶುದ್ಧಿಯಾಗುತ್ತದೆ ಎಂದು ಹೇಳಿದರು.
ಮಠಗದ್ದೆ ಶ್ರೀ ಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಡಿ. ಮನೋಹರ್, ಕಾರ್ಯದರ್ಶಿ ಎಸ್. ರಘು, ಖಜಾಂಜಿ ಎಸ್.ಜಿ. ಮಾಲತೇಶ್, ರಾಮಣ್ಣ ಇನ್ನಿತರರು ಹಾಜರಿದ್ದರು.