11ರಂದು ಲಾರಿ ಮಾಲೀಕರಿಂದ ರಸ್ತೆ ತಡೆ
ಹೊಸನಗರ: ಮರಳು ಸಾಗಣೆ ಸಂಬಂಧ ಪರವಾನಗಿ ನಿರಾಕರಿಸಿ ಜಿಲ್ಲಾಡಳಿತ ಅನ್ಯಾಯ ಎಸಗುತ್ತಿದೆ ಎಂದು ಹೊಸನಗರ-ಸಾಗರ ಲಾರಿ ಮಾಲೀಕರ ಸಂಘ ಅಧ್ಯಕ್ಷ ಹಾಲಗದ್ದೆ ಉಮೇಶ್ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆಗಾಲದ ನಂತರ ಮರಳು ಸಾಗಣೆಗೆ ಪರವಾನಗಿ ನೀಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ನೂರಾರು ಲಾರಿ ಮಾಲೀಕರು ಮಾತ್ರವಲ್ಲ, ಅದನ್ನು ನಂಬಿರುವ ಕೂಲಿ ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣದ ಕನಸು ಹೊಂದಿದ ಸಾವಿರಾರು ಜನರಿಗೆ ದಿಕ್ಕು ತೋಚದಂತಾಗಿದೆ ಎಂದು ಆರೋಪಿಸಿದರು.
ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವ ಜನಪ್ರತಿನಿಧಿಗಳಿಗು ಕೂಡ ಅಧಿಕಾರಿಗಳು ತಪ್ಪು ಮಾಹಿತಿ ನೀಡು ದಿಕ್ಕು ತಪ್ಪಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮರಳು ಸಾಗಾಟ ಬಗ್ಗೆ ಕಾಳಜಿ ಇಲ್ಲ.
ಮಾತ್ರವಲ್ಲ ಉದ್ಯೋಗವಿಲ್ಲದೆ ಕಂಗಾಲಾಗಿರುವ ಕೂಲಿಕಾರ್ಮಿಕರ ಕಷ್ಟದ ಬಗ್ಗೆ ಕೂಡ ಕಾಳಜಿ ಹೊಂದಿಲ್ಲ ಎಂದು ಆರೋಪಿಸಿದರು.
ಇಲ್ಲಿ ಮರಳು ಪಡೆಯಲು ಸಾಧ್ಯವಿಲ್ಲದ ಕಾರಣ ಹೊರ ಜಿಲ್ಲೆಗಳಿಂದ ದುಬಾರಿ ಬೆಲೆ ಕೊಟ್ಟು ಮರಳನ್ನು ತರಿಸುವ ಅಸಹಾಯಕ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದರು.
ರಸ್ತೆ ತಡೆ: ಮರಳು ಸಾಗಾಟ ಸಂಬಂಧ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿರುವ ಜಿಲ್ಲಾಡಳಿತದ ಕ್ರಮ ಖಂಡಿಸಿ ನ.11 ರಂದು ರಸ್ತೆ ತಡೆ ಮತ್ತು ತೀವ್ರ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು.
ವೇದಾಂತಪ್ಪಗೌಡ, ಚಂದ್ರಣ್ಣ, ಪ್ರಕಾಶಶೆಟ್ಟಿ, ವಿರೂಪಾಕ್ಷಪ್ಪ, ಶಿವಾನಂದಗೌಡ, ಕುಮಾರ್, ಅಭಿಲಾಷ್, ಚಂದ್ರಶೇಖರಶೆಟ್ಟಿ ಉಪಸ್ಥಿತರಿದ್ದರು.