ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂತೂ ಮುಗಿಯಿತು ಅಂಚೆ ಮುಷ್ಕರ

Vishwanath S
Updated On : 9 Nov 2013, 12:20 pm

ಶಿವಮೊಗ್ಗ: 5 ಸಿಬ್ಬಂದಿ ಅಮಾನತು ಹಿಂಪಡೆಯಲು ಒಪ್ಪಿಕೊಳ್ಳುವುದರೊಂದಿಗೆ ಅಂಚೆ ಅಧೀಕ್ಷಕರು ಹಾಗೂ ಸಿಬ್ಬಂದಿ ನಡುವಿನ ತಿಕ್ಕಾಟ ಮೂರನೇ ದಿನಕ್ಕೆ ಮುಕ್ತಾಯವಾಯಿತು.
ಪ್ರತಿಭಟನೆಯ ಮೂರನೇ ದಿನವಾದ ಶುಕ್ರವಾರ ಶಿವಮೊಗ್ಗ ವಿಭಾಗದ ಎಲ್ಲಾ ಅಂಚೆ ಕಚೇರಿಗಳನ್ನು ಬಂದ್ ಮಾಡಿದ್ದ ಸಿಬ್ಬಂದಿ ನಗರದ ಕೋಟೆ ರಸ್ತೆಯಲ್ಲಿರುವ ವಿಭಾಗೀಯ ಕಚೇರಿಯನ್ನು ಮುತ್ತಿಗೆ ಹಾಕಿದ್ದರು. ಇವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಅಂಚೆ ಅಧೀಕ್ಷಕರೊಂದಿಗೆ ಚರ್ಚೆ ನಡೆಸಿದರು.
 6 ಸಿಬ್ಬಂದಿ ಅಮಾನತು ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕಾರ್ಮಿಕ ಕ್ಷೇತ್ರದಲ್ಲಿ ಹಲವು ವರ್ಷ ಕೆಲಸ ಮಾಡಿದ್ದೇನೆ. ಅವರ ಕಷ್ಟಗಳು ಗೊತ್ತು. ಅಂಚೆ ಅಧೀಕ್ಷಕರು ಬೇಡಿಕೆ ಈಡೇರಿಸಲು ತಾವೂ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.
ಪ್ರಸನ್ನಕುಮಾರ್ ಭೇಟಿ: ನಂತರ ನಾಲ್ಕೈದು ಬಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಅಂಚೆ ಅಧೀಕ್ಷಕರೊಂದಿಗೆ ಚರ್ಚೆ ನಡೆಸಿದರು. ಸಂಜೆಯ ನಂತರ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಸಹ ಸ್ಥಳಕ್ಕೆ ಆಗಮಿಸಿದರು.
 ಅವರ ಸಮ್ಮುಖದಲ್ಲಿ ರಾತ್ರಿ 9 ಗಂಟೆಗೆ ಅಂಚೆ ಅಧೀಕ್ಷಕ ಚಂದ್ರಕಾಂತ ಕಾಮತ್ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಸಿಬ್ಬಂದಿಯ ವರ್ತನೆಗೆ ಬಾಗಿದ ಅವರು ಕ್ಷಮೆ ಯಾಚಿಸಿ ಕರ್ತವ್ಯಕ್ಕೆ ಹಿಂತಿರುಗುವಂತೆ ಮನವಿ ಮಾಡಿದರು. ನಂತರ ಸ್ಥಳಕ್ಕೆ ಮತ್ತೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಆಗಮಿಸಿದರು.
ಅಧೀಕ್ಷಕರ ವರ್ಗಾವಣೆಗೆ ಒತ್ತಾಯ: ಅಂಚೆ ಅಧೀಕ್ಷಕರು ಕ್ಷಮೆ ಯಾಚಿಸಿದ ನಂತರ ನೌಕರರ ಒಕ್ಕೂಟವು ಪ್ರತಿಭಟನೆ ಹಿಂಪಡೆಯಲು ನಿರ್ಧರಿಸಿತು. ಇವರನ್ನು ವರ್ಗ ಮಾಡಬೇಕೆಂಬ ಬೇಡಿಕೆ ಇನ್ನೂ ಚಾಲ್ತಿ ಇದ್ದು, ಇದೇ ನ.15ರಂದು ನಡೆಯುವ ಸರ್ಕಲ್ ಮೀಟಿಂಗ್‌ನಲ್ಲಿ ಚರ್ಚಿಸಲಾಗುವುದು. ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರೆ ಮತ್ತೆ ಪ್ರತಿಭಟನೆ ಮುಂದುವರಿಸುವುದಾಗಿ ಒಕ್ಕೂಟದ ಮುಖಂಡರು ಹೇಳಿದ್ದಾರೆ.
ಅಂಚೆ ಬಂದ್: ಅಂಚೆ ಅಧೀಕ್ಷಕರ ವರ್ತನೆ ಖಂಡಿಸಿ ಪ್ರತಿಭಟನೆ ತೀವ್ರಗೊಳಿಸಿದ್ದ ಅಂಚೆ ನೌಕರರ ಒಕ್ಕೂಟವು ಶುಕ್ರವಾರ ಇಡೀ ಶಿವಮೊಗ್ಗ ಡಿವಿಜನ್ ಎಲ್ಲಾ ಅಂಚೆ ಕಚೇರಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರಧಾನ ಅಂಚೆ ಕಚೇರಿಯಿಂದ ವಿಭಾಗೀಯ ಆಡಳಿತ ಕಚೇರಿ ವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು.
ಬೇಡಿಕೆ ಈಡೇರಿಸಲು ಒಪ್ಪದಿದ್ದರೆ ಅಹೋರಾತ್ರಿ ಪ್ರತಿಭಟನೆಗೂ ಅವರು ಸಿದ್ಧತೆ ನಡೆಸಿದ್ದರು. ಆದರೆ, ರಾತ್ರಿ ವೇಳೆಗೆ ಅಂಚೆ ಅಧೀಕ್ಷಕರು ಕ್ಷಮೆ ಕೇಳುವುದರೊಂದಿಗೆ ಪ್ರತಿಭಟನೆ ಮುಕ್ತಾಯವಾಗಿದೆ.
ಪ್ರತಿಭಟನೆಯಲ್ಲಿ ಗ್ರೂಪ್ ಸಿ ವಿಭಾಗದ ರಾಘವೇಂದ್ರ ಜಿ., ಪೋಸ್ಟ್ ಮನ್ ಗ್ರೂಪ್ ಡಿ ವಿಭಾಗದ ಕಾರ್ಯದರ್ಶಿ ಎಚ್.ಆರ್. ಈಶ್ವರಪ್ಪ, ಜಿಡಿಎಸ್ ಕಾರ್ಯದರ್ಶಿ ರಾಜ್ ಕುಮಾರ್ ಎಚ್.ವಿ. ಸೇರಿದಂತೆ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement