ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೆಳದಿ ಉತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

Vishwanath S
Updated On : 9 Nov 2013, 12:20 pm

ಸಾಗರ: ಕೆಳದಿ ಉತ್ಸವವನ್ನು ಅದ್ಧೂರಿ ಆಚರಣೆ, ಮೆರವಣಿಗೆ, ಆಡಂಬರದ ಬದಲು ಕೆಳದಿ ಅರಸರು ನಾಡಿಗೆ ನೀಡಿದ ಕೊಡುಗೆ ಕುರಿತು ಪುನರ್ ಮನನ ಮಾಡಿಕೊಳ್ಳುವ ರೀತಿಯಲ್ಲಿ ನಡೆಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಕೆಳದಿ ಉತ್ಸವ ಆಚರಣೆ ಅಂಗವಾಗಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಳದಿ ಅರಸರ ಆಳ್ವಿಕೆ ಸಂದರ್ಭದಲ್ಲಿ ಹಲವು ಐತಿಹ್ಯಗಳು ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿ. 2ರಂದು ಕೆಳದಿ ಉತ್ಸವ ಆಚರಿಸಲು ಉದ್ದೇಶಿಸಿದ್ದು, ರು. 10 ಲಕ್ಷ ಹಣ ಬಿಡುಗಡೆ ಮಾಡಿದೆ. ಮುಂದಿನ ವರ್ಷದಿಂದ ನಿರಂತರವಾಗಿ ಕೆಳದಿ ಉತ್ಸವ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹತ್ವದ ಸ್ಥಾನ: ಡಿ. 2ರಂದು ಕೆಳದಿ ಇತಿಹಾಸದ ಪುಟದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ದೂತರನ್ನು ರಥದಲ್ಲಿಟ್ಟು ಎಳೆಯುವ ವಿಶೇಷ ಸಂಪ್ರದಾಯ ಕೆಳದಿ ಹೊರತು ಬೇರೆ ಕಡೆ ಕಾಣುವುದು ಅಪರೂಪ. ಇದೇ ದಿನದಂದು ಕೆಳದಿ ಉತ್ಸವ ಆಚರಿಸುವುದು ಸೂಕ್ತ ಎಂದರು.
ಉತ್ಸವದ ಅಂಗವಾಗಿ ಕೆಳದಿ ಇತಿಹಾಸ ಸಂಬಂಧಿಸಿದಂತೆ ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಕೆಳದಿ ಹಾಗೂ ಇಕ್ಕೇರಿ ದೇವಸ್ಥಾನ ಅಭಿವೃದ್ಧಿಗೆ ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಳೆಗಾಲದಲ್ಲಿ ದೇವಸ್ಥಾನ ಸೋರುತ್ತಿರುವ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಜೊತೆಗೆ ಕೆಳದಿ ಗ್ರಾಮ ಪ್ರವೇಶಿಸುವಲ್ಲಿ ಮಹಾದ್ವಾರ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
ಶೀಘ್ರ ಕಾಮಗಾರಿ: ಇತಿಹಾಸ ಪ್ರಸಿದ್ಧ ಕೆಳದಿ ಕೆರೆಯ ಅಭಿವೃದ್ಧಿಗೆ ಸುಮಾರು 1.50 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಕೆಳದಿಯ ರಥ ಪೂರ್ಣ ಹಾಳಾಗಿದ್ದು, ಅದನ್ನು ಹೊಸತಾಗಿ ಹೊಸತಾಗಿ ನಿರ್ಮಾಣ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಕೆಳದಿ ಉತ್ಸವ ಆಚರಿಸುವ ಜೊತೆಗೆ ಈ ಭಾಗದ ಅಭಿವೃದ್ಧಿಗೂ ನಿಗಾವಹಿಸಲಾಗುವುದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಉತ್ಸವವನ್ನು ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಉತ್ಸವದ ಸಂದರ್ಭದಲ್ಲಿ ಗ್ರಾಮೀಣ ಸೊಗಡು, ಸಾಂಸ್ಕೃತಿಕ ಹಾಗೂ ಜನಪದ ಕಲಾ ಪ್ರಕಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಆಡಳಿತದ ಜೊತೆಗೆ ಸ್ಥಳೀಯರ ಸಹಕಾರವನ್ನು ಪಡೆದು ಮಾದರಿಯಾಗಿ ಉತ್ಸವ ನಡೆಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಸಾಜಿದ್ ಅಹಮದ್ ಮುಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಚಕ್ಕೇರಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಚಂದ್ರಶೇಖರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಜಿ. ಜೋಯಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್, ವೆಂಕಟೇಶ್, ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಇತಿಹಾಸ ವೇದಿಕೆಯ ಅಧ್ಯಕ್ಷ ಡಾ. ವೆಂಕಟೇಶ್ ಜೋಯಿಸ್, ಕಾರ್ಯದರ್ಶಿ ಜಿ. ನಾಗೇಶ್, ಜಿಪಂ ಸದಸ್ಯ ಸುಮಂಗಲ ರಾಮಕೃಷ್ಣ, ಲಲಿತಾ ನಾರಾಯಣ್, ಕೆಳದಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement