ಗಾಣಿಗನ ಕೆರೆ ಅವ್ಯವಸ್ಥೆ: ಕ್ರಮಕ್ಕೆ ಒತ್ತಾಯ
ಸಾಗರ: ತಾಲೂಕಿನ ಆನಂದಪುರಂ ಗಾಣಿಗನ ಕೆರೆ ಕಸಕಡ್ಡಿಯಿಂದ ತುಂಬಿದ್ದು, ಇದರಿಂದ ರೈತರ ಜಮೀನು ಒಣಗುತ್ತಿದೆ. ಈ ಬಗ್ಗೆ ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕೆರೆ ಹರಿಯುವ ಗುಂಡಿಗದ್ದೆಬೈಲು, ಮಾಸ್ತಿಕಲ್ಲು, ಕಣ್ಣೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ 750 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿನ ಜಮೀನಿಗೆ ಈ ನೀರು ಆಸರೆಯಾಗಿದೆ. ಆದರೆ, ಕೆಲವು ವರ್ಷಗಳಿಂದ ಕೆರೆಗೆ ಆನಂದಪುರಂ ಗ್ರಾಮದ ಸುತ್ತಮುತ್ತಲಿನ ಕಸ, ತ್ಯಾಜ್ಯ, ಪ್ಲಾಸ್ಟಿಕ್ ರಾಶಿಯನ್ನು ತುಂಬಲಾಗುತ್ತಿದೆ. ಇದರಿಂದ ನೀರು ಹರಿದು ಹೋಗುವ ತೂಬು ಮುಚ್ಚಿ ಹೋಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಮೂರ್ನಾಲ್ಕು ವರ್ಷಗಳಿಂದ ತೂಬು ಮುಚ್ಚಿ ಹೋಗಿರುವುದರಿಂದ ನೀರು ಹರಿಯುವಿಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಬೇಸಿಗೆ ಸಂದರ್ಭದಲ್ಲಿ ಜಮೀನು ಒಣಗಿ ಹೋಗಿ ಫಸಲು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೆರೆ ಅಭಿವೃದ್ಧಿಪಡಿಸಿ, ಹೂಳೆತ್ತುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ತಕ್ಷಣ ಕೆರೆಯ ಹೂಳು ಎತ್ತಿ, ತೂಬನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರಾದ ಶೇಷಪ್ಪ, ಮಂಜಪ್ಪ, ಅಶೋಕ, ಪ್ರಸನ್ನ, ಲಿಂಗರಾಜ್, ವಾಸು, ಉಮೇಶ್ ಇನ್ನಿತರರು ಒತ್ತಾಯಿಸಿದ್ದಾರೆ.