ಧ್ವಜಾರೋಹಣ ಕಾರ್ಯಕ್ರಮ
ಜೋಗ್‌ಫಾಲ್ಸ್: ಇಲ್ಲಿನ ಕ್ರಿಸ್ತರಾಜ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೂರಾರು ಕ್ರಿಸ್ತ ಬಾಂಧವರ ಸಮ್ಮುಖದಲ್ಲಿ ಹರಪ್ಪನಹಳ್ಳಿ ಚರ್ಚ್‌ನ ಧರ್ಮಗುರು ರೋಮನ್ ಪಿಂಟೋ ಮತ್ತು ಕ್ರಿಸ್ತರಾಜ ದೇವಾಲಯದ ಧರ್ಮಗುರು ಸ್ಟೀಫನ್ ಅಲ್ಬುಕರ್ಕ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಧರ್ಮಗುರು ಸ್ಟೀಫನ್ ಅಲ್ಬುಕರ್ಕ್, ಧ್ವಜವು ಧರ್ಮದ ಶಾಂತಿ ಸಂದೇಶದ ಪ್ರತೀಕವಾಗಿದ್ದು, ಈ ಧ್ವಜವನ್ನು ನೋಡುವುದರಿಂದ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸದಷ್ಟು ಪುಣ್ಯ ಲಭಿಸುತ್ತದೆ ಎಂದವರು ಹೇಳಿದರು.
ವಾರ್ಷಿಕೋತ್ಸವದ ಅಂಗವಾಗಿ ಇಂದಿನಿಂದ ಪೂಜಾವಿಧಿ ವಿಧಾನಗಳು ನಡೆಯುತ್ತದೆ. ಧರ್ಮಗುರು ರೋಮನ್ಸ್ ಪಿಂಟೋ ಮಾತನಾಡಿ, ಇಂದು ಎಲ್ಲೆಡೆ ಶಾಂತಿ ಎಂಬುದು ಮರೀಚಿಕೆಯಾಗಿದೆ. ನಾವು ಇಂದು ಧರ್ಮದ ಹಾದಿಯಲ್ಲಿ ನಡೆಯದಿರುವದೇ ಇದಕ್ಕೆ ಕಾರಣ ಎಂದರು.
ಇ- ಲಾಂಜ್ ಕೇಂದ್ರಕ್ಕೆ ಚಾಲನೆ
ಶಿವಮೊಗ್ಗ: ಬಹುನಿರೀಕ್ಷಿತ ಕೆನರಾ ಬ್ಯಾಂಕಿನ 24್ಢ7 ಬ್ಯಾಂಕಿಂಗ್ ವ್ಯವಸ್ಥೆಯ ಇ-ಲಾಂಜ್ ಕೇಂದ್ರಕ್ಕೆ ನಗರದ ವಿನೋಬ ನಗರ ಬಡಾವಣೆಯ ಸೂಡಾ ಕಾಂಪ್ಲೆಕ್ಸ್‌ನಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಚಾಲನೆ ನೀಡಿದರು.
ನಗದು ಪಾವತಿಯ ಕಿಯೋಸ್ಕ್, ಚೆಕ್ ಪಾವತಿಯ ಕಿಯೋಸ್ಕ್, ಪಾಸ್‌ಬುಕ್ ಪ್ರಿಂಟಿಂಗ್ ಕಿಯೋಸ್ಕ್, ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್, ಆನ್‌ಲೈನ್ ಟ್ರೇಡಿಂಗ್, ಬಿಜಿನೆಸ್ ಚಾನಲ್ ವೀಕ್ಷಣೆಗಾಗಿ ಒಂದು ಟಿವಿ, ಇ- ಸ್ಟಾಂಪಿಂಗ್ ವ್ಯವಸ್ಥೆ, ಬ್ಯಾಂಕಿನ ಯೋಜನೆಗಳ ಮಾಹಿತಿ ಫಲಕಗಳು ಇಲ್ಲಿವೆ. ಅಲ್ಲದೆ, ಗ್ರಾಹಕರಿಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಸಲಹಾ ಪೆಟ್ಟಿಗೆಗಳೂ ಇವೆ.
ಇ- ಲಾಂಜ್ ಕೇಂದ್ರಕ್ಕೆ ಚಾಲನೆ ನೀಡಿದ ವೇಳೆ ಬ್ಯಾಂಕಿನ ಉಪ ಮಹಾಪ್ರಬಂಧಕ ಎಂ.ಎಂ. ಚಿನಿವಾರ್, ಎಜಿಎಂ ಸತೀಶ್ ಚಂದ್ರ ಶೆಟ್ಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬರಾವ್ ಸೇರಿದಂತೆ ಬ್ಯಾಂಕಿನ ಹಲವು ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಎಲ್ಲ ವರ್ಗದವರಿಗೂ ಶಾದಿ ಭಾಗ್ಯ ವಿಸ್ತರಿಸಲು ಒತ್ತಾಯ
ಸೊರಬ: ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗದ ಜನರಿಗೂ ವಿಸ್ತರಿಸಬೇಕು ಎಂದು ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ಹೋರಾಟ ವೇದಿಕೆಯವರು ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದ ವೇದಿಕೆಯವರು ರಾಜ್ಯದ ಎಲ್ಲ ಸಮುದಾಯದ ಬಡ ಕುಟುಂಬಗಳಿಗೆ ಶಾದಿ ಭಾಗ್ಯ ಯೋಜನೆ ವಿಸ್ತರಿಸಬೇಕು. ಇಲ್ಲವೆಂದಲ್ಲಿ ತಾಲೂಕಿಗೆ ಒಮ್ಮೆ ಸಾರ್ವಜನಿಕ ವಿವಾಹ ಮಹೋತ್ಸವವನ್ನು ಸರ್ಕಾರದ ವತಿಯಿಂದಲೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಮತ ಓಲೈಕೆಗಾಗಿ ರಾಜಕಾರಣ ಮಾಡುವುದನ್ನು ಬಿಟ್ಟು ಸಮಾಜದ ಎಲ್ಲ ವರ್ಗದ ಜನರನ್ನು ಏಕ ರೀತಿಯಿಂದ ಕಾಣುವಂತಾಗಬೇಕು. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಸಮಾಜದವರು ಮಾತ್ರ ಮತ ನೀಡಿಲ್ಲ. ರಾಜ್ಯದಲ್ಲಿ ಬೇರೆ ವರ್ಗದವರು ಸಹಾ ಅಲ್ಪಸಂಖ್ಯಾತರಿದ್ದು, ಅವರಿಗೂ ಯೋಜನೆ ವಿಸ್ತರಿಸಲಿ. ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಮತವೊಂದೆ ಬೇಕಿದ್ದಲ್ಲಿ ಈಗಿನಂತೆ ಯೋಜನೆ ಮಾಡಲಿ ಎಂದು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಹೋರಾಟಕ್ಕೆ ಈ ನಿಟ್ಟಿನಲ್ಲಿ ನಾವು ವೇದಿಕೆ ವತಿಯಿಂದ ಬೆಂಬಲಿಸುತ್ತೇವೆ ಎಂದರು.
ಕಾರ್ಯದರ್ಶಿ ವೀರೇಂದ್ರ ಗೌಡ, ರಾಮಪ್ಪ, ಶರತ್ ಸ್ವಾಮಿ, ರಾಘು ಬಾಪಟ್, ಸೋಮಶೇಖರ್, ಮಲ್ಲಿಕಾರ್ಜುನ್, ವೀರಭದ್ರಗೌಡ, ಮಾರುತಿ, ಪರಶುರಾಮಪ್ಪ ಗಣಪತಿ, ಕೃಷ್ಣಮೂರ್ತಿ ಇದ್ದರು.
ಗುತ್ತಿಗೆದಾರರ ಸಂಘಕ್ಕೆ ಆಯ್ಕೆ
ಸೊರಬ: ತಾಲೂಕು ಗುತ್ತಿಗೆದಾರರ ಸಂಘದ ಸಾಮಾನ್ಯ ಸಭೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆ.ಗಣಪತಿ ಓಟೂರು, ಅಧ್ಯಕ್ಷರಾಗಿ ಕೆ.ನಾಗರಾಜ್, ಉಪಾಧ್ಯಕ್ಷ ಎಸ್.ಜಿ. ದೇವರಾಜ್, ಪ್ರಧಾನ ಕಾರ್ಯದರ್ಶಿ ಎನ್.ಬಿ. ಓಂಕಾರಪ್ಪ, ಸಹ ಕಾರ್ಯದರ್ಶಿ ಜಿ. ಅಬೂಬಕರ್, ಖಜಾಂಚಿ ಎಚ್.ಎಂ. ಶಿವಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
ಪಾತ್ರಾಭಿನಯ: ರಾಷ್ಟ್ರಮಟ್ಟಕ್ಕೆ ಆಯ್ಕೆ
ತೀರ್ಥಹಳ್ಳಿ: ಎನ್.ಸಿ.ಇ.ಆರ್.ಟಿ. ವತಿಯಿಂದ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದಕ್ಷಿಣ ಭಾರತ ಪ್ರಾಂತೀಯ ಮಟ್ಟದ 2013-14ನೇ ಸಾಲಿನ ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪಧೆಯಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ. ನವದೆಹಲಿಯಲ್ಲಿ ಡಿ. 11ರಂದು ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಭಾರತವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.
ಜಗತ್ ಎಸ್.ಜೆ, ಆರ್. ವೈಷ್ಣವಿ, ಧೃತಿ ಬಿ.ಜಿ., ಆಶ್ರಿತಾ ಉಡುಪ, ಜಿ. ರೋಹನ್ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಿಕ್ಷಕ ಮಂಜಣ್ಣನಾಯಕ್ ತರಬೇತಿ ನೀಡಿದ್ದಾರೆ.
ಇಂದು ಸಹ್ಯಾದಿ ಪ್ರಶಸ್ತಿ ಪ್ರದಾನ
ತೀರ್ಥಹಳ್ಳಿ: ಮಲೆನಾಡ ಸಾಧಕರಾದ ಹೆಚ್.ಜಿ. ಗೋವಿಂದೇಗೌಡ ಮತ್ತು ಕೋಣಂದೂರು ಲಿಂಗಪ್ಪ ಇವರಿಗೆ ನ. 9ರಂದು ಕುಪ್ಪಳಿಯಲ್ಲಿ ಸಹ್ಯಾದ್ರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬೆಂಗಳೂರಿನ ಸಹ್ಯಾದ್ರಿ ಸಂಘ ಈ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಂಡಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ಕಿಮ್ಮನೆ ರತ್ನಾಕರ್, ವಿಶೇಷ ಆಹ್ವಾನಿತರಾಗಿ ಕಡಿದಾಳು ಪ್ರಕಾಶ್ ಭಾಗವಹಿಸುವರು. ಕೆ.ವಿ.ಆರ್. ಟ್ಯಾಗೋರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಮಾರಂಭ ಸಮಯ ಸಂಜೆ.5.30ಕ್ಕೆ, ಸ್ಥಳ: ಹೇಮಾಂಗಣ, ಕುಪ್ಪಳಿ.
ಪೇದೆ ಮೇಲೆ ವ್ಯಾಪಾರಿ ಹಲ್ಲೆ
ತೀರ್ಥಹಳ್ಳಿ: ಫುಟ್‌ಪಾತ್ ಹಣ್ಣಿನ ವ್ಯಾಪಾರಿ ಪೊಲೀಸರ ಮೇಲೆ ಕೈಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಗಾಂಧಿ ಚೌಕ ಸದಾ ಜನನಿಬಿಡ ಪ್ರದೇಶ. ವಾಹನ ದಟ್ಟಣೆಯೂ ಹೆಚ್ಚು. ಸಂಚಾರ ನಿಯಂತ್ರಿಸಲು ಹರಸಾಹಸಪಡುವ ಪೊಲೀಸರಿಗೆ ಫುಟ್‌ಪಾತ್‌ನಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವ ಹಣ್ಣಿನ ವ್ಯಾಪಾರಿಗಳದ್ದು ತಲೆನೋವಿನ ಸಮಸ್ಯೆ. ವಾಹನ ನಿಲುಗಡೆಗೆಂದು ಗುರುತಿಸಿರುವ ಆಯಕಟ್ಟಿನ ಸ್ಥಳದಲ್ಲಿ ಈ ವಾಪಾರಿಗಳದ್ದೇ ಕಾರುಬಾರು. ಜೊತೆಗೆ ತರಕಾರಿ ವ್ಯಾಪಾರಿಗಳೂ ಇವರ ಜೊತೆ ಸೇರುತ್ತಾರೆ.
ಕಾರು, ಬೈಕುಗಳನ್ನು ನಿಲುಗಡೆ ಮಾಡಲೂ ಸಾಕಷ್ಟು ತೊಂದರೆ ಕಾಡುತ್ತದೆ. ಶುಕ್ರವಾರ ಮಧ್ಯಾಹ್ನ ಕೂಡ ಇಂಥದೆ ವಾಹನ ದಟ್ಟಣೆಯ ಸಮಯದಲ್ಲಿ ಹಣ್ಣು ಮಾರುವ ವ್ಯಾಪಾರಿಗೆ ಪೊಲೀಸರು ಸಾಕಷ್ಟು ಬಾರಿ ಮುನ್ನೆಚ್ಚರಿಕೆ ಕೊಟ್ಟಾಗಲೂ ಬೆಲೆ ಕೊಡದ ವ್ಯಾಪಾರಿ ಕ್ಯಾರೇ ಎನ್ನಲಿಲ್ಲ. ಸಿಟ್ಟಿಗೆದ್ದ ಪೊಲೀಸ್ ವ್ಯಾಪಾರಿಗೆ ಗದರಿಸಲು ಪೆಟ್ಟು ಕೊಟ್ಟಿದ್ದಾರೆ. ಆದರೆ, ಆ ಹಣ್ಣಿನ ವ್ಯಾಪಾರಿ ತಿರುಗಿ ಪೊಲೀಸ್ ಸಿಬ್ಬಂದಿಗೆ ಮೇಲೆ ಕೈಮಾಡಿದ್ದಾನೆ. ಜೊತೆಗೆ ಎಎಸ್‌ಐ ಕೂಡ ಇದ್ದದ್ದು, ಅವರ ಮೇಲೂ ವ್ಯಾಪಾರಿ ಕೈಮಾಡಲು ಹೋಗಿದ್ದಾನೆ. ಈ ನಡುವೆ ಇಬ್ಬರೂ ಪೆಟ್ಟಿನ ವಿನಿಮಯ ಮಾಡಿಕೊಂಡಿದ್ದಾರೆ. ಹಣ್ಣಿನ ವ್ಯಾಪಾರಿಯ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ. ಹಣ್ಣಿನ ವ್ಯಾಪಾರಿ ತೌಸಿಫ್ ಎಂದು ಗುರುತಿಸಲಾಗಿದೆ.
ಇಂದಿನಿಂದ 'ನನಗ್ಯಾಕೋ ಡೌಟ್'
ಸಾಗರ: ಇಲ್ಲಿನ ಉದಯ ಕಲಾವಿದರಿಂದ ನ.9 ಮತ್ತು 10ರಂದು ಸಂಜೆ 7ಗಂಟೆಗೆ ಪಟ್ಟಣದ ಸೇವಾಸಾಗರ ಶಾಲೆಯ ಅಜಿತ ಸಭಾಭವನದಲ್ಲಿ ಬಿ.ಆರ್. ಲಕ್ಷ್ಮಣರಾವ್ ರಚಿಸಿರುವ ನನಗ್ಯಾಕೋ ಡೌಟ್ ನಗೆ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದಲ್ಲಿ ಡಾ.ಟಿ.ಎಸ್. ರಾಘವೇಂದ್ರ, ಸಿ.ಜಿ. ಶ್ರೀಧರ್, ಕಿಶೋರ ಪ್ರಭು ಗೋಳಗೋಡು, ರಾಘವೇಂದ್ರ ಭಟ್, ಪುಷ್ಪಾ ರಾಘವೇಂದ್ರ, ಬಿ.ಇ. ಗೀತಾ ಅಭಿನಯಿಸಿದ್ದಾರೆ. ರಂಗಕರ್ಮಿ ಸಿ.ಟಿ.ಬ್ರಹ್ಮಾಚಾರ್ ನಿರ್ದೇಶಿಸಿರುವ ಈ ನಾಟಕಕ್ಕೆ ಎಸ್.ಎಂ. ಗಣಪತಿ ಕಾಮತ್ ಸಂಗೀತ ನಿರ್ದೇಶನ ನೀಡಿದ್ದರೆ ಮೃತ್ಯುಂಜಯ ಬೆಳಕಿನ ವಿನ್ಯಾಸ ಮಾಡಿದ್ದಾರೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ರಾಜ್ಯೋತ್ಸವ ಸಮಾರಂಭ
ಸೊರಬ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೇವಲ ಕಡತಗಳಲ್ಲಿ ಮಾತ್ರ ಕಾಣುವ ಭಾಗ್ಯ ನಮ್ಮದಾಗಿದೆ ಎಂದು ವಕೀಲ ಚಾಮರಾಜ್ ಮಳಕೇರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಶಕುನವಳ್ಳಿ ಗ್ರಾಮದಲ್ಲಿ ವಿವಿಧ ಸಂಘ- ಸಂಸ್ಥೆ ಗ್ರಾಮಸ್ಥರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಧೇಶಿಸಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವಪ್ಪ, ಆಚರಣೆ ಅಂಗವಾಗಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಬೃಹತ್‌ಬೈಕ್ ರ್ಯಾಲಿ ನಡೆಸಿದರು. ಶಾಲಾ ಸಮಿತಿ ಅಧ್ಯಕ್ಷ ಮಲ್ಲಪ್ಪ, ಮುಖ್ಯೋಪಾಧ್ಯಾಯ ಖಲೀಲ್ ಸಾಬ್, ದೈಹಿಕ ಶಿಕ್ಷಕ ಶಿವಪ್ಪ, ರಾಮಕೃಷ್ಣಪ್ಪ, ರಾಘವೇಂದ್ರ, ಬಸವಣ್ಯಪ್ಪ ಹಾಲುಂಡೇರ್, ಅಜ್ಜಪ್ಪ ಕಡ್ಲೇರ, ನಿಂಗಪ್ಪ ಲಕ್ಕೊಳ್ಳೇರ್, ಜಗದೀಶ್, ಮಾಲತೇಶ್, ಸುಮಂತ್ , ಚೆನ್ನಬಸವ ಹಿತ್ಲಮನಿ, ರವಿ ಬಾನಪ್ಪ, ರಮೇಶ್, ಬಜ್ಜಣ್ಣ, ಗ್ರಾಮಸ್ಥರು ಇದ್ದರು.
ವಿದ್ಯಾರ್ಥಿನಿಯಿಂದ ಹಣ ಅಪಹರಣ
ಹೊಸನಗರ: ಪಟ್ಟಣದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ ಬುರ್ಖಾ ಧರಿಸಿದ ಇಬ್ಬರು ಮಹಿಳೆಯರು ಆಕೆಯಲ್ಲಿದ್ದ ಹಣ ಮತ್ತು ಒಡವೆ ಅಪಹರಿಸಿರುವ ಘಟನೆ ತಾಲೂಕಿನ ಹುಲುಸಾಲೆ ಮಳವಳ್ಳಿ ಬಳಿ ನಡೆದಿದೆ.
ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಪಾವನ(19) ತಾಲೂಕಿನ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯ ಬಳ್ಳಿಬೈಲಿನಿಂದ ಹುಲುಸಾಲೆ ಮಳವಳ್ಳಿ ಬಸ್ ತಂಗುದಾಣಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇಬ್ಬರು ಮಹಿಳೆಯರು ಬಾಲಕಿಯನ್ನು ಕಾಡಿನೊಳಗೆ ಕರೆದೊಯ್ದು ಒಡವೆ ಮತ್ತು ಹಣವನ್ನು ಹೆದರಿಸಿ ಪಡೆದುಕೊಂಡ ಮೇಲೆ ಪರಾರಿಯಾಗಿದ್ದಾರೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಹೊಸನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿಭಾ ಪುರಸ್ಕಾರ ಸಮಾರಂಭ ನಾಳೆ
ಭದ್ರಾವತಿ: ಗುರು ಮಡಿವಾಳ ಮಾಚಿದೇವರ 40ನೇ ವರ್ಷದ ಜಯಂತ್ಯುತ್ಸವ ಹಾಗೂ 19ನೇ ವರ್ಷದ ಪ್ರತಿಭಾ ಪುರಸ್ಕಾರ, ಮಾಚಿದೇವ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನ.10ರ ಬೆಳಿಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಗುರುವೀರ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಬಿ.ಟಿ. ಬಾಲಾಜಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ, ಅಂದು ಬೆಳಗ್ಗೆ ಸಿದ್ಧಾರೂಢ ನಗರದ ಕಾಳಿದಾಸ ಬಡಾವಣೆಯಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿತ್ರದುರ್ಗದ ಮಾಚಿದೇವ ಮಹಾ ಸಂಸ್ಥಾನ ಮಠದ ಶ್ರೀಗಳಾದ ಬಸವ ಮಾಚಿದೇವ ಮಹಾಸ್ವಾಮಿ ವಹಿಸುವರು. ಶಾಸಕ ಎಂ.ಜೆ. ಅಪ್ಪಾಜಿ ಶಂಕುಸ್ಥಾಪನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಸೇರಿದಂತೆ ಅನೇಕ ಶಾಸಕರು, ನ್ಯಾಯಾಧೀಶರು ಭಾಗವಹಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಟಿ. ಬಾಲಾಜಿ ವಹಿಸುವರು.
ಸಂವೇದನಾ ಕಾರ್ಯಕ್ರಮ
ಶಿವಮೊಗ್ಗ: ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಹಯೋಗದಲ್ಲಿ ನ. 9ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನ್ಯಾಯಾಧೀಶರುಗಳಿಗಾಗಿ ಸಂವೇದನಾ ಕಾರ್ಯಕ್ರಮ ಏರ್ಪಡಿಸಿದೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಪಂ ಸಿಇಒ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್ ಮುಖ್ಯ ಅತಿಥಿಯಾಗಿ ಆಗಮಿಸುವರು.