ಬಿಎಸ್ವೈ ಟೀಕಿಸುವುದೇ ಕೆಲವರ ಕೆಲಸ: ಆರೋಪ
ಹೊಸನಗರ: ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿರುವ ಬಿಜೆಪಿಯ ಕೆಲವು ನಾಯಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರರನ್ನು ಟೀಕಿಸುವುದೆ ತಮ್ಮ ಸಾಧನೆಯನ್ನಾಗಿ ಮಾಡಿದ್ದಾರೆ ಎಂದು ಕೆಜೆಪಿ ಜಿಲ್ಲಾ ಕಾರ್ಯದರ್ಶಿ ವಾಟಗೋಡು ಸುರೇಶ್ ಆರೋಪಿಸಿದರು.
ತಾಲೂಕಿನ ರಿಪ್ಪನ್ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ನಾಯಕರನ್ನು ಮೆಚ್ಚಿಸುವ ಭರದಲ್ಲಿ ಸುಖಾಸುಮ್ಮನೆ ಯಡಿಯೂರಪ್ಪರನ್ನು ಟೀಕಿಸುತ್ತಿದ್ದು, ಮುಂದಿನ ದಿನದಲ್ಲಿ ಪಾಠ ಕಲಿಯಲಿದ್ದಾರೆ ಎಂದರು. ಒಂದು ರಾಷ್ಟ್ರೀಯ ಪಕ್ಷವಾಗಿ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗದ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದು ದೊಡ್ಡ ಸಾಧನೆಯಾಗಲಿದೆ ಹೊರತು ಗೆಲ್ಲುವುದಕ್ಕಲ್ಲ ಎಂದು ಟೀಕಿಸಿದರು.
ಮೋದಿಯಿಂದ ಹೇಳಿಸಿ: ಯಡಿಯೂರಪ್ಪ ಬಿಜೆಪಿ ಬೇಕೋ ಬೇಡಮೊ ಎಂದು ದಿನಕ್ಕೊಂದು ಹೇಳಿಕೆ ನೀಡುವ ಬಿಜೆಪಿಯ ನಾಯಕರು ಧೈರ್ಯವಿದ್ದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯಿಂದ ಹೇಳಿಸಿ ಎಂದು ಸವಾಲು ಹಾಕಿದ ಅವರು, ಬಿಎಸ್ವೈ ಇಲ್ಲದ ಬಿಜೆಪಿ ರಾಜ್ಯದಲ್ಲಿ ಯಾವುದೆ ಸ್ಥಾನ ಗಳಿಸಲು ಅಸಾಧ್ಯ. ಯಡಿಯೂರಪ್ಪ ಅವರನ್ನು ಸುಮ್ಮನೆ ಕೆಣಕದಿರಿ ಎಂದು ಎಚ್ಚರಿಸಿದರು. ಪರಮೇಶ್ವರ್, ಮೆಣಸೆ ಆನಂದ್ ಇತರರಿದ್ದರು.