ಬ್ರಾಹ್ಮಣ ಮಹಾಸಭಾ ಚುನಾವಣೆ: ಬಿರುಸಿನ ಚಟುವಟಿಕೆ
ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾ ಚುನಾವಣೆಯ ಕಾವು ಏರಲಾರಂಭಿಸಿದ್ದು, ಬಿರುಸಿನ ಚಟುವಟಿಕೆ ನಡೆದಿದೆ.
ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಲಿ ಖಜಾಂಚಿಯಾಗಿರುವ ಈ ಮಹಾಸಭಾದ ಮುಂದಾಳತ್ವ ಮುಂದಿನ ಅವಧಿಗೆ ತಾವೇ ತೆಗೆದುಕೊಳ್ಳಬೇಕೆಂದು ಅನೇಕರು ಮುಂದಾಗಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಆಸಕ್ತಿ ಕಂಡುಬಂದಿದೆ.
21 ಸ್ಥಾನ: ಸಂಘಟನೆಯ ಕಾರ್ಯಕಾರಿ ಮಂಡಳಿ ಸದಸ್ಯರ ಸಂಖ್ಯೆ 21. ಶಿವಮೊಗ್ಗ ನಗರಕ್ಕೆ 11 ಸ್ಥಾನಗಳು, ಶಿವಮೊಗ್ಗ ಗ್ರಾಮಾಂತರಕ್ಕೆ 1, ಉಳಿದಂತೆ ಎಲ್ಲಾ ತಾಲೂಕುಗಳಿಗೂ ಒಂದೊಂದು ಸ್ಥಾನವಿದ್ದರೆ, ಮೂರು ಮಹಿಳಾ ಮೀಸಲು ಸ್ಥಾನಗಳಿವೆ.
ನ.17ರಂದು ಶಿವಮೊಗ್ಗದಲ್ಲಿ ಗೌಪ್ಯ ಮತದಾನ ನಡೆಯಲಿದ್ದು, ನಾಮಪತ್ರಿಕೆ ಸಲ್ಲಿಕೆ ಕಾರ್ಯ ಬಿರುಸಿನಿಂದ ನಡೆದಿದೆ. ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮುದಾಯ ದೊಡ್ಡದಿದ್ದರೂ ಸಾಮಾನ್ಯ ಪ್ರಮಾಣದಲ್ಲಿ ಸದಸ್ಯರನ್ನು ಹೊಂದಿದ್ದು, ಮತದಾನಕ್ಕೆ 1770 ಮಂದಿ ಅರ್ಹರಾಗಿದ್ದಾರೆ. ಒಟ್ಟಾರೆ ಮಹಾಸಭಾದಲ್ಲಿ 2014 ಮಂದಿ ಸದಸ್ಯರಿದ್ದಾರೆ.
ನಾಮಪತ್ರ ಸಲ್ಲಿಕೆ: ಸಾಗರ ಕ್ಷೇತ್ರ ಪ್ರತಿನಿಧಿಸಿ ಒಂದು, ತೀರ್ಥಹಳ್ಳಿ, ಸೊರಬ, ಹೊಸನಗರ, ಭದ್ರಾವತಿಯಿಂದ ತಲಾ ಎರಡು ನಾಮಪತ್ರ ಸಲ್ಲಿಕೆಯಾಗಿದ್ದರೆ, ಶಿವಮೊಗ್ಗ ಗ್ರಾಮಾಂತರದಿಂದ 1, ಶಿವಮೊಗ್ಗ ನಗರ ಕ್ಷೇತ್ರದಿಂದ 32 ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 9 ಕಡೆ ದಿನ. ನ.10ರಂದು ಪರಿಶೀಲನೆ ಕಾರ್ಯ ನಡೆಯಲಿದ್ದು, 11ರಂದು ವಾಪಸ್ ಪಡೆಯಲು ಅವಕಾಶವಿದೆ.
ಸಿಹಿ- ಕಹಿ: ಕಳೆದ ಸಾಲಿನ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಚಟುವಟಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ. ಒಂದಷ್ಟು ಸಮಾಜಮುಖಿ ಚಟುವಟಿಕೆ ನಡೆದಿದ್ದರೂ, ಸಾಕಷ್ಟು ಕೆಲಸಗಳಾಗಬೇಕಾಗಿತ್ತು ಎಂಬುದು ಹಾಲಿ ನಾಮಪತ್ರ ಸಲ್ಲಿಸಿದ ಕೆಲವರ ಅಭಿಪ್ರಾಯ. ಒಂದಷ್ಟು ಬದಲಾವಣೆ ತರಬೇಕು, ಸಮಾಜದ ಸಂಘಟನೆ- ಅಭಿವೃದ್ಧಿಗೆ ಬೇರೆ ಬೇರೆ ಚಟುವಟಿಕೆ ನಡೆಸಲು ಅವಕಾಶವಿದ್ದು, ಈ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯ ಎಂದು ಅವರು ಹೇಳುತ್ತಾರೆ. ಸದಸ್ಯತ್ವ ನೋಂದಣಿಯನ್ನು ವ್ಯಾಪಕವಾಗಿ ಮಾಡಿಲ್ಲ ಎಂದ ಟೀಕೆಯೂ ಕೇಳಿಬಂದಿದೆ.
ಚಟುವಟಿಕೆ: 1948ರಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಲಯ ಸ್ಥಾಪಿಸಲಾಯಿತು. ಹೀಗಾಗಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು 2010ರಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಯಿತು. 42 ಕೊಠಡಿಗಳ ನವೀಕರಣ, 12 ಕೊಠಡಿಗಳ ನಿರ್ಮಾಣ, ನೂತನ ಸಭಾಂಗಣ ನಿರ್ಮಿಸಲಾಗಿದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಸೇರಿದವರನ್ನು ಗುರುತಿಸಿ ಮಾಸಾಶನ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಹಾಗೆಯೇ ವಿದ್ಯಾರ್ಥಿ ನಿಲಯದಲ್ಲಿ ಜಿಮ್ನಾಷಿಯಂ ವಿಭಾಗ ತೆರೆಯಲಾಗಿದೆ.
ರಾಜಕೀಯ ತುರುಸು: ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೂ ಹಾಲಿ ಮಹಾಸಭಾ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ. ಮಹಾಸಭಾದ ಖಜಾಂಚಿಯಾಗಿದ್ದ ಕೆ.ಬಿ. ಪ್ರಸನ್ನಕುಮಾರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬುದು ಕುತೂಹಲ. ಕನ್ನಡಪ್ರಭ ಅವರನ್ನು ಮಾತನಾಡಿಸಿದಾಗ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈ ವರೆಗೆ ನಿರ್ಧರಿಸಿಲ್ಲ ಎಂದು ತಿಳಿಸಿದರು.
ಇನ್ನೊಂದೆಡೆ ಹಳೆಯ ಕಾರ್ಯಕಾರಿ ಸಮಿತಿಯ ಕೆಲವರು ಸ್ಪರ್ಧೆಯಿಂದ ಹಿಂದೆ ಸರಿಯುವ ಲಕ್ಷಣ ಕಂಡುಬರುತ್ತಿದೆ. ಮತ್ತೆ ಕೆಲವರು ತಮ್ಮದೇ ಸಿಂಡಿಕೇಟ್ ರಚಿಸಿಕೊಂಡು ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈ ಮಧ್ಯೆಯೇ ಹೊಸ ಮುಖಗಳು ಕಾರ್ಯಕಾರಿ ಸಮಿತಿಯಲ್ಲಿ ಸೇರಿಕೊಳ್ಳಲು ಅತ್ಯಾಸಕ್ತಿ ವಹಿಸಿದ್ದು, ನಾಮಪತ್ರ ಸಲ್ಲಿಸಿದ್ದಾರೆ.