ವಿಐಎಸ್‌ಎಲ್: ಕೇಂದ್ರ ಮಂತ್ರಿ ಜತೆ ಚರ್ಚೆ
ಭದ್ರಾವತಿ: ವಿಐಎಸ್‌ಎಲ್ ಖಾಸಗಿಕರಣಗೊಳ್ಳದಂತೆ ಕೇಂದ್ರ ಮಂತ್ರಿಗಳಾದ ವೀರಪ್ಪ ಮೊಯಿಲಿ, ಮಲ್ಲಿಖಾರ್ಖುನ ಖರ್ಗೆ ಅವರೊಂದಿಗೆ ಮಾತನಾಡುವುದಾಗಿ ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ ಹೇಳಿದರು.
ಅವರು ಅನ್ಯ ಕಾರ್ಯನಿಮಿತ್ತ ಕ್ಷೇತ್ರದ ಮೂಲಕ ಹಾದುಹೋಗುವಾಗ ಬುಧವಾರ ವಿಐಎಸ್‌ಎಲ್ ಅತಿಥಿಗೃಹದಲ್ಲಿ ತಂಗಿದ್ದ ವೇಳೆ ಅವರನ್ನು ಭೇಟಿ ಮಾಡಿದ ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಹಾಸ ಹಾಗೂ ಪದಾಧಿಕಾರಿಗಳು, ವಿಐಎಸ್‌ಎಲ್ ಮತ್ತು ಎಂಪಿಎಂ ಉಳಿಸಿ ಹೊರಾಟ ಸಮಿತಿ ಮುಖಂಡರು ಕಾರ್ಖಾನೆಯು ಉಳಿವಿಗಾಗಿ ನಡೆಸಿರುವ ಹೋರಾಟವನ್ನು ಕುರಿತು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕೇಂದ್ರ ಉಕ್ಕು ಪ್ರಾಧಿಕಾರದೊಂದಿಗೆ ಕೇಂದ್ರ ಸರ್ಕಾರದ ರಾಜ್ಯ ಮಂತ್ರಿಗಳಿಗೆ ಪತ್ರ ಬರೆಯುವ ಭರವಸೆ ನೀಡಿದರು.
ನವೆಂಬರ್ 19 ರಂದು ಚಿಕ್ಕಮಗಳೂರಿಗೆ ಭೇಟಿ ನೀಡಲಿರುವ ವೀರಪ್ಪ ಮೊಯ್ಲಿ, ಮಲ್ಲಿಖಾರ್ಖುನ ಖರ್ಗೆಯವರೊಂದಿಗೆ ಖುದ್ದಾಗಿ ಈ ವಿಷಯ ಚರ್ಚಿಸುವುದಾಗಿ ಹೇಳಿದರು ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಹಾಸ ತಿಳಿಸಿದರು.
ಸಂಸದರ ಭೇಟಿ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಎಲ್. ರಂಗೇಗೌಡ, ಎಚ್. ನರಸಿಹಯ್ಯ, ಅಸ್ಮತ್ ಪಾಶ, ಮಹಮದ್ ಸನಾಉಲ್ಲಾ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಹಾಜರಿದ್ದರು.