ಶಾದಿ ಭಾಗ್ಯ ಎಲ್ಲ ವರ್ಗದವರಿಗೂ ವಿಸ್ತರಿಸದಿದ್ದರೆ ರದ್ದುಗೊಳಿಸಿ
ಕ.ಪ್ರ. ವಾರ್ತೆ, ಶಿಕಾರಿಪುರ, ನ.8
ಅಲ್ಪಸಂಖ್ಯಾತರಿಗೆ ಮಾತ್ರ ಶಾದಿ ಭಾಗ್ಯ ಯೋಜನೆಯ ನೆಪದಲ್ಲಿ ರಾಜ್ಯ ಸರ್ಕಾರ ಕೋಮು ಸಂಘರ್ಷದ ವಾತಾವರಣ ನಿರ್ಮಾಣಕ್ಕೆ ಸಿದ್ಧವಾಗಿದ್ದು, ಕೂಡಲೇ ಎಲ್ಲಾ ವರ್ಗದ ಅರ್ಹ ಬಡವರಿಗೆ ಶಾದಿ ಭಾಗ್ಯ ಸೌಲಭ್ಯ ಕಲ್ಪಿಸಬೇಕು ಎಂದು ಶಿಕಾರಿಪುರದ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಹುಲಗಿ ಕೃಷ್ಣ ಆಗ್ರಹಿಸಿದರು.
ಶುಕ್ರವಾರ ರಾಜ್ಯ ಸರ್ಕಾರ ಸೀಮಿತ ವರ್ಗ ಉದ್ದೇಶವಾಗಿರಿಸಿಕೊಂಡು ಜಾರಿಗೊಳಿಸಲು ಕಂಕಣಬದ್ಧವಾಗಿರುವ ಶಾದಿ ಭಾಗ್ಯ ಯೋಜನೆಯ ಅವೈಜ್ಞಾನಿಕ ಕ್ರಮ ಖಂಡಿಸಿ ಸಂಘಟನೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಶಾದಿ ಭಾಗ್ಯದ ನೆಪದಲ್ಲಿ ಈಗಾಗಲೇ ಅಲ್ಪಸಂಖ್ಯಾತ ಸಮುದಾಯದ ಸಾವಿರ ಅರ್ಹರಿಗೆ 50 ಸಾವಿರ ಮೌಲ್ಯದ ವಿವಿಧ ಸೌಲಭ್ಯ ವಿತರಿಸಲು ಆತುರದ ನಿರ್ಧಾರ ಕೈಗೊಂಡಿದ್ದು ಕೇವಲ ಸಾವಿರ ಅರ್ಹರಿಗೆ ಮಾತ್ರ ವಿತರಿಸಿದಲ್ಲಿ ಉಳಿದವರು ಸರ್ಕಾರದ ಯೋಜನೆಯನ್ನು ಪಡೆಯಲು ಅವಿವಾಹಿತರಾಗಿ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದ ಅವರು, ಕೇವಲ ಅಲ್ಪಸಂಖ್ಯಾತ ವರ್ಗಕ್ಕೆ ಮಾತ್ರ ಯೋಜನೆ ಸೀಮಿತಗೊಳಿಸಿ ಸರ್ಕಾರ ಒಡೆದು ಆಳುವ ನೀತಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಗಮನದಲ್ಲಿರಿಸಿ ಸೀಮಿತ ವರ್ಗದ ಮತ ಬೇಟೆಗಾಗಿ ಶಾದಿ ಬಾಗ್ಯ ಜಾರಿಗೊಳಿಸುವ ಹುನ್ನಾರವಾಗಿದ್ದು, ಇಂತಹ ಅವೈಜ್ಞಾನಿಕ ಕ್ರಮದಿಂದ ಪ್ರಜಾಪ್ರಭುತ್ವದಲ್ಲಿ ಎಲ್ಲಾ ವರ್ಗಕ್ಕೆ ಸಮಾನ ಹಕ್ಕು ಎಂಬ ಸಂವಿಧಾನಬದ್ಧ ಘೋಷಣೆಗೆ ಅಪಚಾರವಾಗಲಿದೆ. ಸರ್ಕಾರ ಎಲ್ಲಾ ವರ್ಗದ ಅರ್ಹ ಬಡವರಿಗೆ ಯೋಜನೆ ವಿಸ್ತರಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಬಡವರಪರ ಪ್ರಾಮಾಣಿಕ ಕಾಳಜಿಗೆ ಸರ್ಕಾರ ಎಲ್ಲಾ ವರ್ಗಕ್ಕೆ ಯೋಜನೆ ವಿಸ್ತರಿಸಬೇಕು. ಇಲ್ಲದಿದ್ದಲ್ಲಿ ರದ್ದುಪಡಿಸುವಂತೆ ಆಗ್ರಹಿಸಿದ ಅವರು, ವರ್ಗ ತಾರತಮ್ಯವಾದಲ್ಲಿ ಸಂಘಟನೆ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.
ನಂತರ ರಾಜ್ಯಪಾಲರಿಗೆ ತಹಸೀಲ್ದಾರ್ ಧರ್ಮೋಜಿರಾವ್ ಮೂಲಕ ಮನವಿ ಸಲ್ಲಿಸಲಾಯಿತು. ಸಂಘಟನೆಯ ವೀರಭದ್ರ, ರಾಜಶೇಖರ, ಕೇಶವ, ಮಹೇಶ್, ನಿತಿನ್, ಪ್ರದೀಪ್, ಮಹೇಶ ಅಬಳೂರು, ಎಲ್ಲೇಶ್, ನರಸಿಂಹ, ಆನಂದ್, ನಾಗರಾಜ್ ಮತ್ತಿತರರು ಹಾಜರಿದ್ದರು.