'ಕಾನುಗೋಡು ರಸ್ತೆ ಅಭಿವೃದ್ಧಿಗೊಳಿಸಿ'
ಹೊಸನಗರ: ತಾಲೂಕಿನ ನಗರದಿಂದ ಕಾನುಗೋಡುವರೆಗಿನ ಪ್ರಮುಖ ಮಾರ್ಗದ 8 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ಅಭಿವೃದ್ಧಿಪಡಿಸಲು ತಾಲೂಕು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ನರ್ತಿಗೆ ಸುರೇಶಗೌಡ ಆಗ್ರಹಿಸಿದ್ದಾರೆ. ಜನಸಂಪರ್ಕದ ಪ್ರಮುಖ ಭಾಗವಾಗಿರುವ ರಸ್ತೆ ಸಂಪರ್ಕ ಶಿಥಿಲಗೊಂಡರೆ ಇಡೀ ಊರು ಅಭಿವೃದ್ಧಿ ಹೀನವಾಗುತ್ತದೆ. ಕಳೆದ 10 ವರ್ಷಗಳಿಂದ ಹೊಸದಾಗಿ ಡಾಂಬರೀಕರಣ ಕಾಣದ ರಸ್ತೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ ತಾಳಿರುವುದನ್ನು ಅವರು ಖಂಡಿಸಿದ್ದಾರೆ.
ಸಾವಿರಾರು ವಾಹನ: ಕಾನುಗೋಡು ಪ್ರಮುಖ ರಸೆಯಲ್ಲಿ ದಿನಂಪ್ರತಿ ದೊಡ್ಡ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತಿದ್ದು ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬರುವುದನ್ನೇ ನಿಲ್ಲಿಸಿವೆ. ಅಲ್ಲದೆ ಕಾನುಗೋಡಿಂದ ಕಾಡಿಗ್ಗೇರಿ ಮಾರ್ಗವಾಗಿ ಚಿಕ್ಕಪೇಟೆ ಸಂಪರ್ಕಿಸುವ ರಸ್ತೆ 2 ವರ್ಷದ ಹಿಂದೆ ಅಭಿವೃದ್ಧಿಗೊಂಡಿದ್ದು ಬಹುತೇಕ ವಾಹನಗಳು ಅಲ್ಲೆ ಓಡಾಡುತ್ತಿವೆ. ಇದರಿಂದ ಪ್ರಮುಖ ಮಾರ್ಗದಲ್ಲಿ ಅಸ್ತಿತ್ವ ಪಡೆದಿರುವ ಕಬಳೆ, ಕರಿಮನೆ, ಮುಂಡಳ್ಳಿ, ಕಂದ್ಲಕೊಪ್ಪ, ನರ್ತಿಗೆ, ನೂಲಿಗ್ಗೇರಿ ಮುಂತಾದ ಗ್ರಾಮಗಳು ಜನಸಂಪರ್ಕದಿಂದ ದೂರವಾಗುತ್ತಿವೆ ಎಂದರು.
'ಕೈ' ನಾಯಕರು ಎಲ್ಲಿ?: ಬಿಜೆಪಿ ಸರ್ಕಾರವಿದ್ದಾಗ ಮತ್ತು ಆರಗ ಜ್ಞಾನೇಂದ್ರ ಶಾಸಕರಾಗಿದ್ದಾಗ ಪ್ರತಿಯೊಂದಕ್ಕೂ ಪ್ರತಿಭಟನೆ, ಟೀಕೆಟಿಪ್ಪಣಿ ಮಾಡುತ್ತಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರು ಈಗೇಕೆ ರಸ್ತೆ ಅವ್ಯವಸ್ಥೆ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಅವರದೆ ಸರ್ಕಾರ, ಸಚಿವರು ಇದ್ದರು ಕೂಡ ರಸ್ತೆ ಅವ್ಯವಸ್ಥೆ ಬಗ್ಗೆ ಏಕೆ ಗಮನಹರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.