ಗುಡವಿ ಪಕ್ಷಿಧಾಮಕ್ಕೆ ಬೇಕಿದೆ ಕಾಯಕಲ್ಪ
ವಿಶೇಷ ವರದಿ
ಕ.ಪ್ರ.ವಾರ್ತೆ , ಸೊರಬ , ನ.9
ರಾಜ್ಯದ ಪ್ರಮುಖ ಪಕ್ಷಿಧಾಮವಾಗಿರುವ ಸೊರಬ ತಾಲ್ಲೂಕು ಗುಡವಿ ಪಕ್ಷಿಧಾಮ ಹಲವಾರು ಕೊರತೆಯಿಂದಾಗಿ ಸೊರಗಿದೆ. ಮರು ಕಾಯಕಲ್ಪಕ್ಕಾಗಿ ಕಾದು ಕುಳಿತಿರುವ ಈ ಪಕ್ಷಿಧಾಮ ಅವನತಿಗೆ ಸಾಗುವ ಮುನ್ನವೇ ಇದರ ಪುನರುತ್ಥಾನ ಆಗಬೇಕಿದೆ.
ಸುಮಾರು 182 ಎಕರೆ ವಿಸ್ತೀರ್ಣದ ಪಕ್ಷಿಧಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಿಲ್ಲ. ಬರುವ ಆದಾಯದ ಮೇಲಷ್ಟೇ ಗಮನ ಹರಿಸಿ, ಮೂಲಭೂತ ಸೌಕರ್ಯಗಳನ್ನು ಕಡೆಗಣಿಸಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ತಗ್ಗಿದೆ.
ಶುಲ್ಕ ಹೆಚ್ಚಳ: ಈ ಮೊದಲು ಇದ್ದ ರು. 15-20 ಪ್ರವೇಶ ಶುಲ್ಕದಿಂದ ಪ್ರತಿವರ್ಷ ಸರಾಸರಿ 1 ಲಕ್ಷ ರು. ಆದಾಯ ಗಳಿಸುತ್ತಿದ್ದ ಇಲ್ಲಿ ಈಗ ರು. 50 ವಿಧಿಸಿದ ಬಳಿಕ ಆದಾಯ 50 ಸಾವಿರಕ್ಕಿಳಿದಿದೆ. ಹಣ ಏರಿರುವ ವಿಚಾರವಾಗಿ ಇಲ್ಲಿನ ಡಿ. ದರ್ಜೆ ನೌಕರರು ಪ್ರವಾಸಿಗರಿಂದ ಬಯ್ಗುಳ ಕೇಳುವಂತಾಗಿದೆ. ದುಬಾರಿಯೆನಿಸಿರುವ ಪ್ರವೇಶ ಶುಲ್ಕದಿಂದಾಗಿ ಪ್ರವಾಸಿಗರು ವಾಪಸ್ಸಾಗುವ ದೃಶ್ಯವಿಲ್ಲಿ ನಿತ್ಯ ಸಾಮಾನ್ಯವಾಗಿದೆ.
ಕೊರತೆಗಳ ಸರಮಾಲೆ: ಏಕೋ ಟೂರಿಸಂನಿಂದ ಧಾಮದ ಅಭಿವೃದ್ಧಿಗೆ ರು. 1.70 ಲಕ್ಷ ಮಂಜೂರಾಗಿದ್ದರೂ ಅದು ಸರಿಯಾಗಿ ಅನುಷ್ಠಾನವಾಗಿಲ್ಲ. ನಿರ್ಮಿತಿ ಕೇಂದ್ರದವರಿಗೆ ರು. 50 ಲಕ್ಷ ಮಂಜೂರಾಗಿದೆಯಾದರೂ ಕೇವಲ ರು. 38 ಲಕ್ಷ ಮೊತ್ತದ ಕಾಮಗಾರಿಗಳಾಗಿದ್ದು, ಅವೂ ಕೂಡ ಕಳಪೆಯಾಗಿದೆ ಎಂಬ ಅಪಸ್ವರವಿದೆ.
ಪಾದಚಾರಿ ಮಾರ್ಗ, ಕೆರೆ ಹೂಳೆತ್ತುವಿಕೆ, ವೀಕ್ಷಣಾ ಗೋಪುರ, ಸೇತುವೆ ನಿರ್ಮಾಣವಾಗಿಲ್ಲ. ಸಮರ್ಪಕ ಬೌಂಡರಿ ಬಂದೋಬಸ್ತಾಗಿಲ್ಲ. ವಿಶ್ರಾಂತಿ ಕೊಠಡಿಗಳಿಲ್ಲ. ಪಕ್ಷಿಧಾಮಕ್ಕೆ ಮೀಸಲಿರುವ ಜಾಗ ಅತಿಕ್ರಮಣಕ್ಕೊಳಗಾಗಿದೆ, ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಂಡಿದೆ. ಕ್ಯಾಂಟೀನ್ ವ್ಯವಸ್ಥೆ ಇಲ್ಲ. ಸಿಬ್ಬಂದಿ ಕೊರತೆಯೂ ಗಮನಾರ್ಹವಾಗಿರುವುದರಿಂದ ಪಡ್ಡೆ ಹುಡುಗರ ಮೋಜಿನ ತಾಣವಾಗಿ ಪಕ್ಷಿಧಾಮ ಉಪಯುಕ್ತವಾಗಿದೆ.
ಆಗಬೇಕಾಗಿದ್ದು: ಪಕ್ಷಿಧಾಮ ವ್ಯಾಪ್ತಿಯಲ್ಲಿನ ರಸ್ತೆಗೆ ಗಚ್ಚುಮಣ್ಣು, ಸಮೀಪದಲ್ಲಿರುವ ವರದಾ ನದಿಯಿಂದ ಏತ ನೀರಾವರಿ ಮೂಲಕ ಸರ್ವಋತು ಕೆರೆಗೆ ನೀರಿನ ವ್ಯವಸ್ಥೆ, ಆವರೊಣದೊಳಗಿನ ಲಂಟಾನ ಸ್ವಚ್ಚತೆ, ಬೋಟಿಂಗ್ ಸೌಲಭ್ಯ, ಕೆರೆಗೆ ಪಕ್ಷಿಗಳ ಆಹಾರಕ್ಕೆ ಪೂರಕವಾಗಿ ಮೀನು ಮರಿ ಬಿಡುವುದು, ಉದ್ಯಾನವನದ ಅಭಿವೃದ್ಧಿ, ಔಷಧೀಯ ವನ ನಿರ್ಮಾಣ, ಆರ್ಕಿಡ್ ರಕ್ಷಣೆ ಮತ್ತು ಸಂಗ್ರಹಣೆ, ಜೀವ ವೈವಿಧ್ಯ ದಾಖಲಾತಿ, ಪ್ರಮುಖ ಜೀವ ಸಂಕುಲಗಳ ಕುರಿತು ಪರಿಚಯ ಮತ್ತು ಮಾಹಿತಿ ಕೇಂದ್ರ, ಕೆರೆ ಹೂಳೆತ್ತುವಿಕೆ, ಬೌಂಡರಿಗೆ ಬೇಲಿ ನಿರ್ಮಾಣ, ಹುಲೆಮರಡಿ ಗೇಟ್ ಬಳಿ ಶುಲ್ಕ ವಸೂಲಾತಿಗೆ ಶೆಡ್ ನಿರ್ಮಾಣ, ಆಯಕಟ್ಟು ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ. ಅಗತ್ಯ ಸಿಬ್ಬಂದಿಗಳ ನೇಮಕಾತಿ - ಇವಿಷ್ಟೂ ಇಲ್ಲಿ ಆಗಬೇಕಿದೆ. ಅದರ ಜೊತೆಗೆ ಈಗ ವಿಧಿಸಿರುವ ರು. 50 ಶುಲ್ಕ ಕಡಿಮೆಯಾದಲ್ಲಿ ಮತ್ತೆ ಪಕ್ಷಿಧಾಮ ಚೇತರಿಸಿಕೊಳ್ಳಲು ಅವಕಾಶವಿದೆ.
ಶಾಸಕರ ಚಿತ್ತ: ಈಗಾಗಲೇ ಪಕ್ಷಿಧಾಮದ ಅಗತ್ಯತೆ ಕುರಿತಂತೆ ಶಾಸಕ ಮಧು ಬಂಗಾರಪ್ಪ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಖುದ್ದು ತಾವೇ ಚರ್ಚಿಸಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿ ಅಗತ್ಯವಿದೆ. ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ತುರ್ತು ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ.