ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಶ್ರೀಮದ್ ಭಗವದ್ಗೀತಾ ಅಭಿಯಾನ

Vishwanath S
Updated On : 10 Nov 2013, 1:06 am

ಸೊರಬ: ಪಟ್ಟಣದ ಸೀತಾರಾಮಚಂದ್ರ ದೇವಸ್ಥಾನದ ಆವರಣದಲ್ಲಿ 11ರ ಸೋಮವಾರ ಮಧ್ಯಾಹ್ನ 3.30ಕ್ಕೆ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಸ್ವರ್ಣವಲ್ಲಿ ಮಠ ಸೋಂದ ಹಾಗೂ ಶ್ರೀಮದ್ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ತಾಲೂಕು ಸಮಿತಿ ಇವರ ಆಶ್ರಯದಲ್ಲಿ ಭಗವದ್ಗೀತಾ ಪುನಶ್ಚೇತನ ಅಭಿಯಾನ ಉದ್ಘಾಟನಾ ಸಮಾರಂಭ ನಡೆಯಲಿದೆ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ.
ನಾಳೆ ಕೆಜೆಪಿ ಪ್ರತಿಭಟನೆ
ಶಿವಮೊಗ್ಗ: ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕರ್ನಾಟಕ ಜನತಾ ಪಕ್ಷವು ನ.11ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಅ.31ರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಅಹೋರಾತ್ರಿ ಹೋರಾಟ ಕೈಗೊಂಡಿದ್ದು, ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಅದರಂತೆ ಜಿಲ್ಲೆಯಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈಶ್ವರಪ್ಪ ಯಾರು: ಬಿಜೆಪಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಲಿಲ್ಲ. ವಿಲೀನ ಆಗಬೇಕು ಎಂದು ಹೇಳುವುದಕ್ಕೆ ಕೆ.ಎಸ್. ಈಶ್ವರಪ್ಪ ಯಾರು ಅವರು ಪಕ್ಷದ ರಾಜ್ಯಧ್ಯಕ್ಷರಾ ಎಂದು ಕೆಜೆಪಿ ರಾಜ್ಯ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್ ಪ್ರಶ್ನಿಸಿದ್ದಾರೆ. ಆಯನೂರು ಮಂಜುನಾಥ್ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದಾಗ ಅವರಿಂದ ಅಧಿಕಾರ ಪಡೆದವರು ಈಗ ಮಾತನಾಡುತ್ತಿದ್ದಾರೆ. ಅವರಿಗೆ ಪ್ರಶ್ನೆ ಕೇಳುವ, ಉತ್ತರ ಪಡೆಯುವ ಅರ್ಹತೆ ಇಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಮುಖಂಡ ಬಿಳಕಿ ಕೃಷ್ಣಮೂರ್ತಿ, ಏಸುದಾಸ್, ವೀರಭದ್ರಪೂಜಾರ್, ನಗರಸಭೆ ಸದಸ್ಯ ಮಾಲತೇಶ್, ನಗರ ಪ್ರಧಾನ ಕಾರ್ಯದರ್ಶಿ ಬಳ್ಳೆಕೆರೆ ಸಂತೋಷ್, ಅಶೋಕ್ ಪೈ ಹಾಗೂ ಮಲ್ಲಿಕಾರ್ಜುನ್, ನಾಗರಾಜ್ ಮತ್ತಿತರರು ಇದ್ದರು.
ಇಂದು ವಿದ್ಯುತ್‌ವ್ಯತ್ಯಯ
ಶಿವಮೊಗ್ಗ: ನಗರದ ಅಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11ಕೆ.ವಿ ಮಾರ್ಗದ ಮತ್ತು ಪರಿವರ್ತಕದ ತುರ್ತು ಕಾರ್ಯವಿರುವುದರಿಂದ ನ.10ರಂದು ನಗರದ ಕೆಲವೆಡೆ ವಿದ್ಯುತ್‌ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಬೆಳಿಗ್ಗೆ 10ರಿಂದ 2 ಗಂಟೆವರೆಗೆ ವಿನೋಬನಗರ 60 ಅಡಿ ರಸ್ತೆ, ಆಟೋ ಕಾಂಪ್ಲೆಕ್ಸ್, ಸೋಮಿನಕೊಪ್ಪ, ಜೆ.ಎಚ್. ಪಟೇಲ್ ಬಡಾವಣೆ, ಪಿ ಅಡ್ ಟಿ. ಕಾಲೋನಿ, ದೇವರಾಜ್ ಅರಸ್ ಬಡಾವಣೆ, ಸೂರ್ಯ ಬಡಾವಣೆ, ಆಲ್ಕೋಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಇಂದು ಉಚಿತ ಕಾರ್ಯಾಗಾರ
ಶಿವಮೊಗ್ಗ:  ಸವಳಂಗ ರಸ್ತೆ ಕಮಲಾ ನರ್ಸಿಂಗ್ ಟಾಪರ್ಸ್ ಕೋಚಿಂಗ್ ಸೆಂಟರ್‌ನಲ್ಲಿ ನ.10ರಂದು ಬೆಳಿಗ್ಗೆ 10ಗಂಟೆಯಿಂದ ಸ್ಪರ್ಧಾತ್ಮಕ ವಿಷಯಗಳ ಕುರಿತು ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ. ಕೆಎಎಸ್, ಐಎಎಸ್, ಪಿಎಸ್ ಐ, ಪಿಸಿ, ಎಸ್ ಡಿಎ, ಡಿಎಡ್, ಮತ್ತು ಐಬಿಪಿಎಸ್, ಬ್ಯಾಂಕ್ ಹಾಗೂ ಸೆಂಟರಲ್ ಹುದ್ದೆಗಳ ಪರೀಕ್ಷಾ ವಿಧಾನ, ಅಧ್ಯಯನಕ್ಕೆ ಬೇಕಾಗುವ ಪುಸ್ತಕ ಹಾಗೂ ನೋಟ್ಸ್‌ಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಸೆಂಟರ್ ತಿಳಿಸಿದೆ. ವಿವರಗಳಿಗಾಗಿ- 9164689999.
'ಮರಳಿಗೆ ಅನುಮತಿ ನೀಡಿ'
ಶಿವಮೊಗ್ಗ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ಸರ್ಕಾರಿ ಹಾಗೂ ಖಾಸಗಿ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಮರಳಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಕೂಡಲೇ ಮರಳನ್ನು ಸಾಗಿಲು ಪರ್ಮಿಟ್ ನೀಡಲು ಅಗತ್ಯ ಕ್ರಮಕೈಗೊಳ್ಳಂತೆ ಜಿಲ್ಲಾ ಪಂಚಾಯ್ತಿ ವಿರೋಧ ಪಕ್ಷದ ನಾಯಕ ಕಲಗೋಡು ರತ್ನಾಕರ್ ಅವರು ಜಿಲ್ಲಾಧಿಕಾರಿಯವರನ್ನು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement