ಮಸಗಲ್ಲಿ ಸೇಫರ್ಜೋನ್ ವಿವಾದ
ಕ.ಪ್ರ.ವಾರ್ತೆ , ಹೊಸನಗರ , ನ.9
ಪರ ವಿರೋಧಕ್ಕೆ ಕಾರಣ ಆಗಿರುವ ಮಸಗಲ್ಲಿ ಸೇಫರ್ಜೋನ್ ಸ್ಥಳ ಗುರುತಿಸುವಿಕೆ ಕುರಿತಂತೆ ಗೊಂದಲದ ವಾತಾವರಣ ಮನೆ ಮಾಡಿದ್ದು ವಿಭಿನ್ನ ಅಭಿಪ್ರಾಯ ಮೂಡಿ ಬಂತು.
ಜಿಲ್ಲಾಧಿಕಾರಿ ಆದೇಶದಂತೆ ತಹಶೀಲ್ದಾರ್. ಎಂ. ಕುಲಕರ್ಣಿ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಸಗಲ್ಲಿ ಗ್ರಾಮಸ್ಥರ ಹಾಗೂ ಕ್ರಷರ್ ಮಾಲೀಕರ ಸೇಫರ್ಜೋನ್ ಕುರಿತ ಜನಾಭಿಪ್ರಾಯ ಪಡೆಯಲಾಯಿತು.
ಬೇಡವೆ ಬೇಡ: ಸುಪ್ರಿಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಗುರುತಿಸಿರುವ ತಾಲ್ಲೂಕಿನ ಮಸಗಲ್ಲಿ ಗ್ರಾಮದಲ್ಲಿ ಜೆಲ್ಲಿಕಲ್ಲು ಪುಡಿ ಮಾಡುವ ಸೇಫರ್ಜೋನ್ ಬೇಡ ಎಂದು ಮಸಗಲ್ಲಿ ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದರಿಂದ ಗ್ರಾಮದ ಸುತ್ತಲಿನ ಮನೆ, ಶಾಲೆ, ಅಂಗನವಾಡಿ, ಕೃಷಿ ಹಾಗೂ ಪರಿಸರದ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ನಮ್ಮ ತಪ್ಪಿಲ್ಲ: ಕ್ರಷರ್ ಮಾಲೀಕರ ಪರವಾಗಿ ಕೆ.ಎಸ್. ಪ್ರಶಾಂತ್ ಮಾತನಾಡಿ ತಮಗೆ ಈಗ ಹಾಲಿ ಇರುವ ಸ್ಥಳದಲ್ಲಿಯೇ ಕಾನೂನು ಮೂಲಕ ಕ್ರಷರ್ ನಡೆಸಲು ಅವಕಾಶ ಕೊಡಿ. ಇಲ್ಲವೇ ಸರಕಾರ ನಿಗದಿ ಮಾಡಿದ ಸೇಫರ್ಜೋನ್ ಪ್ರದೇಶದಲ್ಲಿ ಅವಕಾಶ ಕೊಡಲು ಮನವಿ ಮಾಡಿದರು.
ಗ್ರಾಮಸ್ಥರ ವಿರೋಧ ಮಾಡಿಕೊಂಡು ಕ್ರಷರ್ ಉದ್ದಿಮೆ ನಡೆಸಲು ಅಸಾಧ್ಯ. ಆದರೆ ಅಧಿಕಾರಿಗಳು ಈ ಕುರಿತಂತೆ ಗ್ರಾಮಸ್ಥರ ದಿಕ್ಕು ತಪ್ಪಿಸುವ ಮೂಲಕ ಕ್ರಷರ್ ಮಾಲೀಕರನ್ನು ದೂರುವಂತೆ ಮಾಡಿದ್ದಾರೆ. ಇದರಿಂದ ಕ್ರಷರ್ ಮಾಲೀಕರು ಆರ್ಥಿಕ ಸಂಕಷ್ಟದಲಿದ್ದಾರೆ. ಶೀಘ್ರದಲ್ಲಿ ತಮಗೆ ಕಾನೂನು ಬದ್ದವಾಗಿ ಕ್ರಷರ್ ನಡೆಸಲು ಅನಮತಿ ನೀಡುವಂತೆ ಅವರು ಕೋರಿದರು.
ಜಿಲ್ಲಾಧಿಕಾರಿಗಳಿಗೆ ವರದಿ: ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್. ಸಿ. ಎಂ.ಕುಲಕರ್ಣಿ ಮಾತನಾಡಿ ಮಸಗಲ್ಲಿ ಗ್ರಾಮದಲ್ಲಿ ಕಲ್ಲು ಕ್ವಾರಿ, ಕ್ರಷರ್ ಬೇಕು. ಆದರೆ ಸೇಫರ್ ಜೋನ್ ಬೇಡ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಸ್ಥಗಿತಗೊಂಡಿರುವ ಕ್ರಷರ್ಗಳನ್ನು ಕಾನೂನುಬದ್ಧವಾಗಿ ನಡೆಸಲು ಅವಕಾಶ ಕೋಡುವಂತೆ ಕ್ರಷರ್ ಮಾಲೀಕರ ಮನವಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಆದೇಶದನ್ವಯ ಮಸಗಲ್ಲಿ ಸೇಫರ್ಜೋನ್ ಸಂಬಂಧ ಎದ್ದಿರುವ ವಿವಾದ ಮತ್ತು ಸಾಧಕ ಬಾಧಕದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತಕೋರಿದ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದ್ದು ಅದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನಿ ಬಿಂದನ್ ಪಾಟಿಲ್, ಮಾಜಿ ಶಾಸಕ ಬಿ. ಸ್ವಾಮಿರಾವ್, ಗ್ರಾಮಸ್ಥರಾದ ದುಮ್ಮ ರೇವಣಪ್ಪ ಗೌಡ, ದೇವಪ್ಪ ಗೌಡ,
ಜಗದೀಶ್, ಚೆನ್ನಬಸಪ್ಪ ಗೌಡ, ಕ್ರಷರ್ಮಾಲೀಕರಾದ ಕಲ್ಯಾಣಪ್ಪ ಗೌಡ, ಗುರುಪ್ರಸಾದ್, ದಿವಾಕರ ಶೆಟ್ಟಿ ಭಾಗವಹಸಿದ್ದರು.