ಮೋದಿ ಕಾರ್ಯಕ್ರಮಕ್ಕಾಗಿ ಪೂರ್ವಭಾವಿ ರ್ಯಾಲಿ
ಸಾಗರ: ಬೆಂಗಳೂರಿನಲ್ಲಿ ನ. 17ರಂದು ನಡೆಯಲಿರುವ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತಾಲ್ಲೂಕು ಬಿಜೆಪಿ ವತಿಯಿಂದ ಪಟ್ಟಣದ ಸಾಗರ ಹೋಟೆಲ್ ವೃತ್ತದಲ್ಲಿ ಪೂರ್ವಭಾವಿ ರ್ಯಾಲಿ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ಮಾತನಾಡಿ, ಯಜಮಾನನಿಲ್ಲದ ಸ್ಥಿತಿ ಎದುರಿಸುತ್ತಿರುವ ದೇಶಕ್ಕೆ ಸಮರ್ಥವಾಗಿ ನಡೆಸಿಕೊಂಡು ಹೋಗುವ ನಾಯಕನ ಅಗತ್ಯವಿದೆ. ಆ ಸ್ಥಾನವನ್ನು ನರೇಂದ್ರ ಮೋದಿಯವರು ಮಾತ್ರ ತುಂಬಲು ಸಾಧ್ಯ. ಇದಕ್ಕಾಗಿ ಮೋದಿಯವರು ದೇಶದಾದ್ಯಂತ ರ್ಯಾಲಿ ನಡೆಸುತ್ತಿದ್ದು ಎಲ್ಲ ಕಡೆ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಆಂತರಿಕ ಆರ್ಥಿಕ ಶಕ್ತಿ ಸಂಪೂರ್ಣ ಹದಗೆಟ್ಟಿದೆ. ಹಣದುಬ್ಬರ, ಭ್ರಷ್ಟಾಚಾರ, ಓಲೈಕೆ ರಾಜಕಾರಣ ಒಂದು ಕಡೆಯಾದರೆ ಬಾಹ್ಯವಾಗಿ ಪಾಕಿಸ್ತಾನ, ಚೀನ, ಗಡಿಯಲ್ಲಿ ನುಸುಳುತ್ತಿದ್ದು, ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿದರು.
ದೇಶಕ್ಕೆ ದೈವದತ್ತವಾಗಿ ನರೇಂದ್ರ ಮೋದಿಯವರು ಸಿಕ್ಕಿದ್ದಾರೆ. ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಗುಜರಾತಿನಲ್ಲಿ ನರೇಂದ್ರ ಮೋದಿಯವರ ಆಡಳಿತದಿಂದಾಗಿ ಅಲ್ಲಿನ ಮುಸ್ಲಿಂ ಬಾಂಧವರು ಮೋದಿ ಪ್ರಧಾನಿಯಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಯ ಮಂತ್ರದಂಡ ಹಿಡಿದುಕೊಂಡು ದೇಶವ್ಯಾಪಿ ಪ್ರವಾಸ ಮಾಡುತ್ತಿರುವ ನರೇಂದ್ರ ಮೋದಿಯವರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬೆಂಗಳೂರಿನಲ್ಲಿ ನಡೆಯುವ ರ್ಯಾಲಿಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಸತೀಶಬಾಬು, ದೇಶದ ಜನರು ಮೋದಿ ಅವರ ನಾಯಕತ್ವವನ್ನು ಬಯಸುತ್ತಿದ್ದಾರೆ. ಈಗಾಗಲೆ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು 10 ರೂ. ಟಿಕೆಟ್ ಖರೀದಿಸಿ 4 ಲಕ್ಷಕ್ಕೂ ಅಧಿಕ ಜನ ಹೆಸರು ನೋಂದಾವಣೆ ಮಾಡಿಸಿಕೊಂಡಿರುವುದು ನರೇಂದ್ರ ಮೋದಿ ಅವರ ವ್ಯಕ್ತಿತ್ವ ತೋರಿಸುತ್ತದೆ. ಜನರು ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.