ಶಿಷ್ಟಾಚಾರ ಉಲ್ಲಂಘಿಸಿ ಕೃಷಿ ಕಾರ್ಮಿಕರ ಸಮಾವೇಶ
ಕ.ಪ್ರ.ವಾರ್ತೆ , ಶಿವಮೊಗ್ಗ , ನ.9
ಶಿಷ್ಟಾಚಾರ ಉಲ್ಲಂಘಿಸಿ ಕುಂಸಿಯಲ್ಲಿ ಇದೇ ನ.11ರಂದು ಸರ್ಕಾರವು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿದಾರರ ಹಾಗೂ ಕೃಷಿ ಕಾರ್ಮಿಕರ ಸಮಾವೇಶ ಆಯೋಜಿಸಲಾಗಿದೆ ಎಂದು ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಆರೋಪಿಸಿದ್ದು, ಸರ್ಕಾರದ ಸಚಿಮೋರೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತಮ್ಮನ್ನು ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಮಾಡಲಾಗುತ್ತಿದೆ. ಈ ಬಗ್ಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಅವರೇ ಹಂಚುತ್ತಾರಾ? ಕಂದಾಯ ಸಚಿವರು ಈ ರೀತಿ ಎಲ್ಲಾ ಕಡೆ ಸಮಾವೇಶ ಮಾಡಿ ಅವರೇ ಸಾಗುವಳಿ ಚೀಟಿಯನ್ನು ಹಂಚುತ್ತಾರಾ ಎಂದು ಕಟುವಾಗಿ ಪ್ರಶ್ನಿಸಿರುವ ಶಾರದಾ ಪೂರ್ಯಾನಾಯ್ಕ್, ಈ ರೀತಿಯೇ ಮಾಡುತ್ತೇವೆಂದು ಸರ್ಕಾರ ಘೋಷಿಸಲಿ. ಆಗ ಎಲ್ಲಿಯೂ ಶಾಸಕರ ಅಗತ್ಯವಿರುವುದಿಲ್ಲ ಎಂದು ಟೀಕಿಸಿದ್ದಾರೆ.
ಸಂವಿಧಾನಾತ್ಮಕವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ನೇತೃತ್ವದಲ್ಲಿ ಮಾತ್ರ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬಹುದು. ಆದರೆ ಕಾಂಗ್ರೆಸ್ ಪಕ್ಷ ಆಡಳಿತಾತ್ಮಕ ವಿಷಯದಲ್ಲಿ ಮೂಗು ತೂರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಂಸಿಯಲ್ಲಿ ಆಯೋಜಿಸಿರುವ ಸರ್ಕಾರಿ ಕಾರ್ಯಕ್ರಮಕ್ಕೆ ತಾವು ಹೆಣ್ಣು ಎಂಬ ಕಾರಣಕ್ಕೆ ಆಮಂತ್ರಣವನ್ನು ಸರ್ಕಾರ ನೀಡದಿದ್ದರೆ ಹೆಣ್ಣಿನ ಧ್ವನಿಯ ಶಕ್ತಿಯನ್ನು ತೋರಿಸುತ್ತೇನೆ ಎಂದು ಅವರು ಸವಾಲೆಸೆದರು.
ಸಮಿತಿ ರಚಿಸಿಲ್ಲ: ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಸಂವಿಧಾನಾತ್ಮಕವಾಗಿ ಬಗರ್ಹುಕುಂ ಸಮಿತಿಗಳನ್ನು ರಚನೆ ಮಾಡಿಲ್ಲ. ಈ ಸಮಿತಿಗಳನ್ನು ಮೊದಲು ರಚಿಸಿ ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಬೇಕಿತ್ತು. ಆಗ ಸಮಾವೇಶ ಮಾಡಿದ್ದರೆ ನಾವೇ ನೆರವಾಗುತ್ತಿದ್ದೆವು. ಆದರೆ ಸರ್ಕಾರಿ ಕಾರ್ಯಕ್ರಮ ಮಾಡಿ ಅದನ್ನು ಪಕ್ಷದ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ. ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಅವರಂತಹ ಹಿರಿಯರಿರುವ ಕಾಂಗ್ರೆಸ್ ಸರ್ಕಾರದಿಂದ ಇಂತಹ ಕ್ರಮವನ್ನು ನಿರೀಕ್ಷಿಸಿರಲಿಲ್ಲ. ಇವರಾದರು ಈ ರೀತಿ ಸಮಾವೇಶ ಮಾಡುವುದು ಸರಿ ಅಲ್ಲ ಎಂದು ತಿಳಿಹೇಳಬಹುದಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಆಯನೂರು ಶಿವಾನಂದಪ್ಪ, ದಾದಾಪೀರ್, ಛತ್ರಪತಿ ನಾಯಕ್, ಕೆ.ಪಿ. ಓಂಕಾರಪ್ಪ, ಡಿ. ಕಾಂತರಾಜ್, ಮುದುವಾಲ ನಾಗರಾಜ್, ದೇವರಾಜ್, ಎಂ.ಆರ್. ನರಸಿಂಹಪ್ಪ ಮತ್ತಿತರರು ಇದ್ದರು.